ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ದಾವಣಗೆರೆ, ಮೇ 17: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಮ್ಮ, ಬುಧವಾರ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮಂಜುಳಮ್ಮ ಆತ್ನಹತ್ಯೆಗೆ ಯತ್ನಿಸಿದ ಗ್ರಾಪಂ ಅಧ್ಯಕ್ಷೆ. ವಿಷ ಸೇವನೆಯ ನಂತರ ತೀವ್ರವಾಗಿ ಅಸ್ವಸ್ಥ ಗೊಂಡಿದ್ದ ಮಂಜುಳಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಹತ್ತು ತಿಂಗಳಿನಿಂದ ದಿದ್ದಿಗೆ ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ತಮಗೆ ಕೆಲ ಗ್ರಾಪಂ ಸದಸ್ಯರು ಮತ್ತು ಶಿಕ್ಷಕರೊಬ್ಬರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ಮತ್ತು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ತನಗಾಗುತ್ತಿರುವ ಕಿರುಕುಳದ ಬಗ್ಗೆ ಸುಮಾರು ಮೂರು ಪುಟಗಳಷ್ಟು ದೂರು ಬರೆದಿರುವ ಮಂಜುಳಮ್ಮ ಬುಧವಾರ ಪತಿಯ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸಲು ಬಂದಿದ್ದಾರೆ.
ಆದರೆ, ಕಚೇರಿಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆ ಯಲ್ಲಿ ಅವರು ಎಸ್ಪಿ ಕಚೇರಿಯಲ್ಲಿಯೆ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಮಂಜುಳಮ್ಮ ವಿಷ ಸೇವಿಸುತ್ತಿದ್ದಂತೆಯೆ ಎಸ್ಪಿ ಕಚೇರಿ ಸಿಬ್ಬಂದಿ ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.