ಮರಳು ಸಾಗಾಟದಿಂದ ತೊಂದರೆ: ಗ್ರಾಮಸ್ಥರಿಂದ ಲಾರಿಗಳನ್ನು ತಡೆದು ಪ್ರತಿಭಟನೆ
ಮೂಡಿಗೆರೆ, ಮೇ 18: ಹೇಮಾವತಿ ನದಿಯ ಮರಳು ಗಣಿಗಾರಿಕಾ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಜೆಸಿಬಿ ಯಂತ್ರ ಬಳಸಿ ಅಕ್ರಮ ಮರಳು ತೆಗೆಯುತ್ತಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಉದುಸೆ ಗ್ರಾಮಸ್ಥರು ಸುಮಾರು 110 ಲಾರಿಗಳನ್ನು ಮಾರ್ಗ ಮಧ್ಯೆ ತಡೆದು ಪ್ರತಿಭಟನೆ ನಡೆಸಿದರು.
ಉದುಸೆ ಸ್ಟಾಕ್‌ಯಾರ್ಡ್‌ನಿಂದ ಮರಳು ಸಾಗಾಟಕ್ಕಾಗಿ ಇಂದು 115 ಲಾರಿಗಳಿಗೆ ಮರಳು ಸಾಗಾಟದ ಪರ್ಮಿಟ್ ನೀಡಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ 12 ಲಾರಿಗಳಲ್ಲಿ ಮರಳನ್ನು ಸಾಗಿಸಲಾಗಿತ್ತು. ನಂತರ 110 ಲಾರಿಗಳು ಇಲ್ಲಿಗೆ ಬಂದಿವೆ. ಪ್ರತಿದಿನವೂ ಇದೇ ರೀತಿ ನೂರಾರು ಲಾರಿಗಳು ಬಂದು ಮರಳನ್ನು ಕೊಂಡೊಯ್ಯುತ್ತಿದ್ದು, ಬತ್ತದ ಗದ್ದೆಗಳು ನಾಶವಾಗುತ್ತಿವೆ. ಗ್ರಾಮ ಸಂಪರ್ಕದ ರಸ್ತೆ ಹಾಳಾಗಿದೆ. ಅಲ್ಲದೆ ಗ್ರಾಮದ ಸುಗ್ಗಿ ಉತ್ಸವ ಸಂದರ್ಭದಲ್ಲಿ ದೇವಿ ದೇವಿರಮ್ಮ ಕುಳಿತುಕೊಳ್ಳುವ ಜಾಗದಲ್ಲೂ ಜೆಸಿಬಿ ಯಂತ್ರ ಬಳಸಿ ಮರಳು ತೆಗೆದಿರುವುದರಿಂದ ಸುಗ್ಗಿ ಉತ್ಸವಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಆದ್ದರಿಂದ ಇಂದು 110 ಲಾರಿಗಳನ್ನು ತಡೆದು ನಿಲ್ಲಿಸಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಲಾರಿಗಳನ್ನು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸ್ಥಳಕ್ಕೆ ಭೇಟಿ ನೀಡಿದ ಮೂಡಿಗೆರೆ ಪಿಎಸ್‌ಐ ರಫೀಕ್ ಪರವಾನಗಿ ಹೊಂದಿರುವ ಲಾರಿಗಳನ್ನು ಬಿಡುವಂತೆ ಮನವಿ ಮಾಡಿದರು. ಸಂಜೆ ನಂತರ ಪೊಲೀಸ್ ರಕ್ಷಣೆಯಲ್ಲಿ ಲಾರಿಗಳಿಗೆ ಮರಳು ತುಂಬಿಸಲು ಅನುವು ಮಾಡಿಕೊಟ್ಟರು. ಈ ವೇಳೆ ಗ್ರಾಮಸ್ಥರಾದ ಯು.ಡಿ.ಅಣ್ಣೇಗೌಡ, ಎಂ.ಜೆ.ಸುಜಯ್, ಯು.ಬಿ.ಮದು, ಯು.ಟಿ.ಆದರ್ಶ, ಯು.ಎನ್.ಪ್ರಜ್ವಲ್, ಯು.ಸಿ.ಭರತ್, ಯು.ಡಿ.ಪೂರ್ಣೇಶ್, ಯು.ಎಸ್.ರಘು, ಜಲೇಂದ್ರ, ಸಾಗರ್, ಯು.ಪಿ.ರಘು ಮತ್ತಿತರರಿದ್ದರು.
ಹೇಮಾವತಿ ನದಿ ಪಾತ್ರದ 3.30 ಎಕರೆ ಪ್ರದೇಶದಲ್ಲಿ ಮರಳು ತೆಗೆಯಲು ಜಿಲ್ಲಾಡಳಿತ ಗುತ್ತಿಗೆದಾರರಿಗೆ ಅನುಮತಿ ನೀಡಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮದ ರೈತರ ಜಮೀನಿನಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರ ಬಳಸಿ ಮರಳು ತೆಗೆಯಲಾಗುತ್ತಿದೆ. ದಬ್ಬಾಳಿಕೆ ಮೂಲಕ ರೈತರ ಜಮೀನಿನಲ್ಲಿ ಸಾಗಿಸಲಾಗುತ್ತಿದೆ. ಪೊಲೀಸರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ
-ಯು.ಬಿ.ಮಧು, ಉದುಸೆ ಗ್ರಾಮಸ್ಥ.