ಜನತಾ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹ
ಭಟ್ಕಳ, ಮೇ 18: ತಾಲೂಕಿನ ಜನತಾ ಕೋ-ಆಪರೇಟಿವ್ ಬ್ಯಾಂಕಿನಲ್ಲಿನ ವಿಮೆ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರ ಆದೇಶದ ಮೇರೆಗೆ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಅಶೋಕ ಹೆಗ್ಡೆ ಹಾಗೂ ದುರ್ಗಪ್ಪ ನಾಯ್ಕ ವಿರುದ್ಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಬ್ಯಾಂಕಿನ ಆಡಳಿತ ಮಂಡಳಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ಈ ಕುರಿತು ತಾಲೂಕಿನ ಖಾಸಗಿ ಹೊಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಜಾಲಿ ಮಾತನಾಡಿದರು.
ಹಲವು ಸಹಕಾರಿ ಸಂಘಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಬಡವರ ಆಸ್ತಿ ಪಾಸ್ತಿಯನ್ನು ಲಪಟಾಯಿಸಲಾಗುತ್ತಿದೆ. ಜನತಾ ಬ್ಯಾಂಕನಲ್ಲಿ 2007-2008ರಲ್ಲಿ ನಡೆದ ಬಡವರ ವಿಮೆ ಹಣದ ದುರ್ಬಳಕೆಯ ಬಗ್ಗೆ 2015ರಲ್ಲಿ ದಾಖಲೆ ಸಹಿತ ದೂರು ಸ್ವೀಕರಿಸಿರುವ ಲೋಕಾಯುಕ್ತರು ಆರೋಪಿಗಳ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆಗ್ರಹಿಸಿದರು.
ಎಮ್.ಡಿ.ನಾಯ್ಕ ಮಾರುಕೇರಿ, ಎಮ್.ಎಮ್.ನಾಯ್ಕ ಜಾಲಿ, ಸುಲೇಮಾನ್ ಮುಂತಾದವರು ಉಪಸ್ಥಿತರಿದ್ದರು.