×
Ad

ದಿಢೀರ್ ದಾಳಿಗೆ ಪ್ರತ್ಯೇಕ ಸಮಿತಿಗಳ ರಚನೆ

Update: 2017-05-18 22:59 IST

ಶಿವಮೊಗ್ಗ ಡಿಸಿಯಿಂದ ದಿಟ್ಟಹೆಜ್ಜೆ
ಬಿ. ರೇಣುಕೇಶ್
ಶಿವಮೊಗ್ಗ, ಮೇ 18: ಜಿಲ್ಲೆ ಹಾಗೂ ಶಿವಮೊಗ್ಗ ನಗರದ ಕೆಲ ಪೆಟ್ರೋಲ್ ಬಂಕ್‌ಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ದೂರುಗಳಿವೆ. ಅಳತೆಯಲ್ಲಿ ಮೋಸ, ಇಂಧನ ಕಲಬೆರಕೆ, ಸೂಕ್ತ ಮೂಲಸೌಕರ್ಯಗಳು ಇಲ್ಲದಿರುವುದು, ಗ್ರಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದಿರುವುದು ಸೇರಿದಂತೆ ಹತ್ತು ಹಲವು ಆರೋಪಗಳು ಕೇಳಿ ಬರುತ್ತಿವೆ.

ಇಂತಹ ಪೆಟ್ರೋಲ್ ಬಂಕ್‌ಗಳಿಗೆ ತಕ್ಕ ಶಾಸ್ತಿ ಮಾಡಲು ಶಿವಮೊಗ್ಗ ಜಿಲ್ಲಾಡಳಿತ ಮುಂದಾಗಿದೆ. ತಮ್ಮ ನೇರ-ನಿರ್ಭೀಡ ಕಾರ್ಯವೈಖರಿಯ ಮೂಲಕ ಸಾರ್ವಜನಿಕ ವಲಯದಲ್ಲಿ ‘ಡೈನಾಮಿಕ್ ಡಿಸಿ’ ಎಂದು ಖ್ಯಾತವಾಗಿರುವ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅವರು ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖರಾಗಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಆಯಾ ತಾಲೂಕುಗಳ ತಹಶೀಲ್ದಾರ್‌ಗಳ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿದ್ದಾರೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾಧಿಕಾರಿಯ ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿ, ತೂಕ- ಅಳತೆ ಇಲಾಖೆಯ ಅಧಿಕಾರಿ ಸೇರಿದಂತೆ ತೈಲ ಕಂಪೆನಿಗಳ ಪ್ರತಿನಿಧಿಗಳು ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.

ತಾಲೂಕು ಸಮಿತಿಗಳಲ್ಲಿ ತಹಶೀಲ್ದಾರ್, ಸ್ಥಳೀಯ ಪೊಲೀಸ್ ಇಲಾಖೆ, ಆಹಾರ ಇಲಾಖೆಯ ಅಧಿಕಾರಿಗಳು ಸಮಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಈ ಸಮಿತಿಗಳು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿರುವ ಪೆಟ್ರೋಲ್ ಬಂಕ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಲಿವೆ. ತಪಾಸಣೆಯ ವೇಳೆ ಏನಾದರೂ ಲೋಪದೋಷ ಕಂಡುಬಂದರೆ ಅಂತಹ ಪೆಟ್ರೋ ಲ್ ಬಂಕ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಿವೆ.

ಸಭೆ: ಪೆಟ್ರೋಲ್ ಬಂಕ್‌ಗಳಿಗೆ ಸಂಬಂಧಿಸಿದಂತೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಡಾ. ಎಂ.ಲೋಕೇಶ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಆಹಾರ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀನಾರಾಯಣ ರೆಡ್ಡಿ, ತೈಲ ಕಂಪೆನಿಗಳ ಪ್ರಮುಖರು ಪಾಲ್ಗೊಂಡಿದ್ದರು. ಸಭೆೆಯಲ್ಲಿ ಪೆಟ್ರೋಲ್ ಬಂಕ್‌ಗಳ ಕಾರ್ಯ ನಿರ್ವಹ ಣೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಾನೂನು ರೀತಿಯಲ್ಲಿ ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಣೆ ಮಾಡಬೇಕು. ಏನೆಲ್ಲ ಸೌಲಭ್ಯಗಳು ಹೊಂದಿರಬೇಕು ಎಂಬಿತ್ಯಾದಿ ವಿವರಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಮಾಲೋಚನೆ ನಡೆಸಿದರು.

ದಿಢೀರ್ ಭೆೇಟಿ, ಪರಿಶೀಲನೆ: ಡಿಸಿ
‘ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಗುಣಮಟ್ಟ, ಅಳತೆ, ಮೂಲಸೌಕರ್ಯಗಳ ಪರಿಶೀಲನೆಗೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ನಿರಂತರವಾಗಿ ಪೆಟ್ರೋಲ್ ಬಂಕ್‌ಗಳಿಗೆ ಸಮಿತಿ ದಿಢೀರ್ ಭೆೇಟಿಯಿತ್ತು, ಪರಿಶೀಲನೆ ನಡೆಸಲಿದೆ. ಭೆೇಟಿಯ ವೇಳೆ ಏನಾದರೂ ಲೋಪದೋಷ ಕಂಡುಬಂದರೆ ಕಾನೂನು ರೀತ್ಯ ಸಂಬಂಧಿಸಿ ಬಂಕ್‌ಗಳ ವಿರುದ್ಧ ಕ್ರಮ ಜರಗಿಸಲಾಗುವುದು.

ಸಮಿತಿಯ ಮೂಲಕ ಗ್ರಾಹಕರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿ ಅನ್ಯಾಯಕ್ಕೆ ಅವಕಾಶವಿಲ್ಲ. ಗ್ರಾಹಕರಿಗೆ ನ್ಯಾಯಯುತ ಸೇವೆ ಲಭ್ಯವಾಗುತ್ತಿದೆ. ಪೆಟ್ರೋಲ್ ಬಂಕ್‌ಗಳ ಸೇವೆಯಲ್ಲಿ ಏನಾದರೂ ಲೋಪದೋಷ ಕಂಡುಬಂದರೆ ಪರಿಶೀಲನೆ ನಡೆಸಲು ರಾಜ್ಯ ಸರಕಾರದ ಹಲವು ಇಲಾಖೆಗಳಿವೆ. ಜೊತೆಗೆ ಪೆಟ್ರೋಲಿಯಂ ಕಂಪೆನಿಗಳು ಕೂಡ ನಿರಂತರ ತಪಾಸಣೆ ನಡೆಸುತ್ತವೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮತ್ತೆ ಪ್ರತ್ಯೇಕ ಸಮಿತಿಗಳ ರಚನೆ ಮಾಡುವ ಅನಿವಾರ್ಯತೆಯಿರಲಿಲ್ಲ. ಡಿ.ಎಸ್. ಅರುಣ್, ಜಿಲ್ಲಾ ಪೆಟ್ರೋಲಿಯಂ ಅಸೋಸಿಯೇಶನ್ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News