ಅಕ್ರಮ ಹಣ ವಸೂಲಿ: ಎಎಸ್ಸೈ, ಸಿಬ್ಬಂದಿ ಅಮಾನತು
ದಾವಣಗೆರೆ, ಮೇ 18: ರಸೀದಿ ನೀಡದೇ ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಎಸ್ಸೈ ಮತ್ತು ಸಿಬ್ಬಂದಿಯನ್ನು ಪೂರ್ವ ವಲಯ ಐಜಿಪಿ ಡಾ. ಎಂ.ಎ. ಸಲೀಂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಸಂಚಾರಿ ಠಾಣೆ ಎಎಸ್ಸೈ ತ್ಯಾಗರಾಜ್, ಸಿಪಿಸಿಗಳಾದ ಜುನೈದ್‌ಬಾಷ, ರಹಮತುಲ್ಲಾ, ದೇವರಾಜ್ ಹಾಗೂ ಇಂಟರ್‌ಸೆಪ್ಟರ್ ವಾಹನದ ಚಾಲಕ ಲೋಕೇಶ್ ಅಮಾನತುಗೊಂಡ ಸಿಬ್ಬಂದಿ. ಇವರು ವಾಹನ ಚಲಾಯಿಸುವವರ ಬಳಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪೂರ್ವ ವಲಯ ಕಚೆೇರಿಯ ಡಿವೈಎಸ್ಪಿ ವಿಜಯ್‌ಕುಮಾರ್ ಎಂ. ಸಂತೋಷ್ ಈ ಬಗ್ಗೆ ಪರಿಶೀಲಿಸಿ ವರದಿ ನೀಡಿದ್ದು, ವರದಿ ಆಧರಿಸಿ ಎಎಸ್ಸೈ, ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಎಸ್‌ಎಸ್ ಹೈಟೆಕ್ ಆಸ್ಪತ್ರೆ ಮುಂಭಾಗದಲ್ಲಿರುವ ಎನ್‌ಎಚ್4 ರಸ್ತೆಯಲ್ಲಿ ದಾವಣಗೆರೆ ದಕ್ಷಿಣ ಸಂಚಾರ ಠಾಣೆಯ ಎಎಸ್ಸೈ ತ್ಯಾಗರಾಜ್ ಮತ್ತು ಸಿಬ್ಬಂದಿಯು ಯಾವುದೇ ರಶೀದಿ ನೀಡದೇ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದ ಬಗ್ಗೆ ಖಚಿತಗೊಂಡ ಹಿನ್ನೆಲೆಯಲ್ಲಿ ಎಎಸೈ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಪ್ರಕಟನೆೆ ತಿಳಿಸಿದೆ.