ಭಟ್ಕಳ: ಹೆಸ್ಕಾಂ ಎಟಿಪಿ ಯಂತ್ರ ಸ್ಥಗಿತ; ಬಿಲ್ ಕಟ್ಟಲು ಜನರ ಪರದಾಟ
ಭಟ್ಕಳ, ಮೇ 18: ಕಳೆದ ಏಪ್ರಿಲ್ 30ಕ್ಕೆ ಭಟ್ಕಳದ ಹೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ತುಂಬಲು ಇರುವ ಎ.ಟಿ.ಪಿ. ಯಂತ್ರದ ಕಾರ್ಯನಿರ್ವಹಣೆಯ ಗುತ್ತಿಗೆ ಅವಧಿಯು ಮುಕ್ತಾಯವಾಗಿದ್ದು, ಇದರಿಂದ ಬುಧವಾರದಂದು ತಮ್ಮ ವಿದ್ಯುತ್ ಬಿಲ್ ಕಟ್ಟಲು ಬಂದ ಜನರಿಗೆ ಸಮಸ್ಯೆ ಉಂಟಾಗಿದೆ.
ತಂತ್ರಜ್ಞಾನ ತುಂಬಾ ಮುಂದುವರೆದಿರುವ ಇವತ್ತಿನ ಕಾಲದಲ್ಲಿ ಜನರು ಇನ್ನು ವಿದ್ಯುತ್ ಬಿಲ್‌ನ್ನು ನಗದು ಕೌಂಟರ್ (ಹಸ್ತಚಾಲಿತ ರಸೀದಿ ಕೌಂಟರ್)ನಲ್ಲಿ ತುಂಬುವ ಸ್ಥಿತಿ ಎದುರಾಗಿದೆ. ಯಂತ್ರದ ಮೂಲಕ ಅತೀ ಬೇಗನೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯ ವಾಗುತ್ತಿದ್ದು, ಈಗ ಕೌಂಡರ್‌ನಲ್ಲಿ ಹೆಸ್ಕಾಂ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ನೇಮಿಸಿದ್ದು, ಕೈಯಿಂದ ರಶೀಧಿಯನ್ನು ಬರೆದುಕೊಡುವುದರಿಂದ ಕೆಲಸ ನಿಧಾನದಲ್ಲಿ ಸಾಗುತ್ತಿದೆ ಎಂದು ತಿಳಿದುಬಂದಿದೆ.
ಒಂದು ರೀತಿಯಲ್ಲಿ ಜಾತ್ರೆಗೆ ಜನರು ಸೇರಿದ ಹಾಗೇ ಹೆಸ್ಕಾಂ ಇಲಾಖೆಯ ಮುಂದಿ ಜನರು ಸೇರಿದ್ದು, ಈ ಮಧ್ಯೆ ಜನರ ಮಧ್ಯೆಯೇ ಗದ್ದಲ ಗೊಂದಲಗಳು ನಡೆಯುತ್ತಿವೆ. ಬೆಳಿಗ್ಗೆ 9ರಿಂದ ಆರಂಭವಾಗಿ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 2ಯಿಂದ 5 ಗಂಟೆಯವರೆಗೆ ನಗದು ಕೌಂಟರ್ ಚಾಲನೆಯಲ್ಲಿ ಇದೆ.
ಈ ಬಗ್ಗೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಹೆಸ್ಕಾಂ ಭಟ್ಕಳ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮಂಜುನಾಥ ಅವರಲ್ಲಿ ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಅವರು ವಿದ್ಯುತ್ ಬಿಲ್‌ನ್ನು ಪಾವತಿಸಿಕೊಳ್ಳುತ್ತಿದ್ದ ಎ.ಟಿ.ಪಿ ಯಂತ್ರವನ್ನು ಮುಂದುವರೆಸಲು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಪೂರ್ಣಗೊಳ್ಳವವರೆಗೆ ಕಂಪನಿ ಕಾರ್ಯಾಲಯ ಹೆಸ್ಕಾಂ ಹುಬ್ಬಳ್ಳಿ ರವರ ನಿರ್ದೇಶನದಂತೆ ಮೇ 1 ರಿಂದ ಭಟ್ಕಳ ಹೆಸ್ಕಾಂ ಕಛೇರಿಯಲ್ಲಿ ಎ.ಟಿ.ಪಿ ಯಂತ್ರದ ಪರ್ಯಾಯವಾಗಿ ನಗದು ಕೌಂಟರ್ ತೆರೆಯಲಾಗುತ್ತದೆ. ಈ ಹಿಂದೆ ಎ.ಡಿ.ಡಿ. ಎನ್ನುವ ಕಂಪನಿಯ ಅಡಿಯಲ್ಲಿ ಎ.ಟಿ.ಪಿ ಯಂತ್ರವು ಕಾರ್ಯನಿರ್ವಹಿಸುತ್ತಿದ್ದು, ಈಗ ಬೇರೆ ಕಂಪನಿಗೆ ನೀಡಿದ ಹಿನ್ನೆಲೆಯೆಲ್ಲಿ ತಾತ್ಕಾಲಿಕವಾಗಿ ಈಗಿನ ಎ.ಟಿ.ಪಿ. ಯಂತ್ರವನ್ನು ನಿಲ್ಲಿಸಲಾಗಿದೆ. ಇನು 15-20 ದಿನದೊಳಗಾಗಿ ಮತ್ತೆ ಎ.ಟಿ.ಪಿ. ಯಂತ್ರ ಆರಂಭವಾಗಲಿದ್ದು, ಆದಷ್ಟು ಬೇಗ ಸಮಸ್ಯೆಯನ್ನು ಸರಿಪಡಿಸುತ್ತೇವೆ. ಎಂದರು.
ಒಟ್ಟಿನಲ್ಲಿ ಇಷ್ಟು ದಿನ ಯಂತ್ರಚಾಲಿತವಾಗಿ ವಿದ್ಯುತ್ ಬಿಲ್ ತುಂಬುತ್ತಿದ್ದ ಜನರಿಗೆ ಹಸ್ತಚಾಲಿತ ರೀತಿಯಲ್ಲಿ ವಿದ್ಯುತ್ ಬಿಲ್ ಕೌಂಟರ್‌ನಿಂದ ಅವರ ಸಮಯ ಹಾಳಾಗುತ್ತಿದ್ದು, ಆದಷ್ಟು ಬೇಗ ಭಟ್ಕಳ ಹೆಸ್ಕಾಂ ಇಲಾಖೆ ಎ.ಟಿ.ಪಿ. ಯಂತ್ರವನ್ನು ಆರಂಭಿಸಲಿ ಎನ್ನವುದು ಸಾರ್ವಜನಿಕರ ಆಶಯವಾಗಿದೆ.