×
Ad

ಮನೆ ಕಟ್ಟಲೆಂದು ಭೂಮಿ ಅಗೆದಾಗ ಅಲ್ಲಿದ್ದವು 465 ಚಿನ್ನದ ನಾಣ್ಯಗಳು

Update: 2017-05-19 14:05 IST

ಬೆಂಗಳೂರು,ಮೇ 19 : ಮಹಿಳೆಯೊಬ್ಬಳ ಮನೆ ಕಟ್ಟಲೆಂದು ಭೂಮಿ ಅಗೆಯುವಾಗ ದೊರೆತ 465 ಚಿನ್ನದ ನಾಣ್ಯಗಳನ್ನು ಮಹಿಳೆ ಮತ್ತು ಅಲ್ಲಿನ ಕೆಲಸಗಾರರು ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕ ಮೆರೆದ ಘಟನೆ ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ಬನಸಮುದ್ರ ಎಂಬ ಗ್ರಾಮದಿಂದ ವರದಿಯಾಗಿದೆ. ತಾವು ಬಡವರಾದರೂ ಈ ಚಿನ್ನದ ನಾಣ್ಯಗಳನ್ನು ನೋಡಿ ಅವುಗಳನ್ನು ತಮ್ಮದಾಗಿಸಲು ಪ್ರಯತ್ನಿಸದೆ ಅಧಿಕಾರಿಗಳಿಗೆ ಹಸ್ತಾಂತರಿಸಿದ ಈ ಜನರ ಪ್ರಾಮಾಣಿಕತೆಯನ್ನು ಎಲ್ಲರೂ ಕೊಂಡಾಡಿದ್ದಾರೆ.

ಲಕ್ಷ್ಮಮ್ಮ (55) ಮತ್ತು ಕೆಲ ಕಾರ್ಮಿಕರು ಬುಧವಾರ ಭೂಮಿ ಅಗೆಯುತ್ತಿದ್ದಾಗ ಮಣ್ಣುಗಳೆಡೆಯಲ್ಲಿ ನಾಣ್ಯಗಳು ಪತ್ತೆಯಾದವು. ಆರಂಭದಲ್ಲಿ ಇವು ಚಿನ್ನದ ನಾಣ್ಯಗಳೆಂಬ ಅರಿವು ಅವರಿಗಿರಲಿಲ್ಲ. ಆದರೆ ಅವುಗಳನ್ನು ತೊಳೆದಾಗಲಷ್ಟೇ ಅವುಗಳು ಚಿನ್ನದ್ದೆಂದು ಕಂಡು ಬಂದಿತ್ತು. ಅವರೆಲ್ಲ ಸೇರಿ ಕೂಡಲೇ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು, ಹಲಗೂರು ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಧರ್ ಸ್ಥಳಕ್ಕೆ ಧಾವಿಸಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಣ್ಯಗಳ ಒಟ್ಟು ತೂಕ 160 ಗ್ರಾಂ ಆಗಿದ್ದು ಪ್ರತಿಯೊಂದರ ವಿನ್ಯಾಸವೂ ವಿಶಿಷ್ಟವಾಗಿದೆ.

ಅದನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿ ಅದರ ಪರಿಶೀಲನೆ ನಡೆಸಲಾಗುವುದು ಎಂದು ಮಂಡ್ಯದ ಸಹಾಯಕ ಆಯುಕ್ತ ಅರುಲ್ ಕುಮಾರ್ ಹೇಳಿದ್ದಾರೆ.

ಈ ನಾಣ್ಯಗಳ ಪರಿಶೀಲನೆಯ ನಂತರ ಇದೇ ಪ್ರದೇಶದಲ್ಲಿ ಭೂಮಿಯನ್ನು ಅಗೆದು ಬೇರೇನಾದರೂ ಪ್ರಾಚೀನ ಬೆಲೆಬಾಳುವ ವಸ್ತುಗಳಿವೆಯೇ ಎಂಬುದನ್ನು ಪತ್ತೆ ಹಚ್ಚಬೇಕೆಂದು ಮಲವಳ್ಳಿ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News