ಅರಬ್ ಜಗತ್ತಿನ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಪಟ್ಟಿಯಲ್ಲಿ ಭಟ್ಕಳದ ಮುಶ್ತಾಖ್ ಮಸೂದ್
ಭಟ್ಕಳ, ಮೇ 19: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ಧ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಸಾಲಿನಲ್ಲಿ 42ನೆ ಸ್ಥಾನ ಪಡೆದಿದ್ದು, ಭಟ್ಕಳ ಹಾಗೂ ಕರ್ನಾಟಕದ ಪಾಲಿಗೆ ಸಂತಸದ ವಿಷಯವಾಗಿದೆ.
ಭಟ್ಕಳದ ಖ್ಯಾತ ಮೌಲಾನ ಕುಟುಂಬದ ಎಸ್.ಎಂ.ಸೈಯದ್ ಮುಶ್ತಾಖ್ ಮಸೂದ್ ಮಧ್ಯಪ್ರಾಚ್ಯದ ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿದ ಟಾಪ್ 50 ಭಾರತೀಯ ಎಕ್ಸಿಕ್ಯೂಟಿವ್ ಗಳ ಯಾದಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಭಟ್ಕಳಿಗರ ಹೆಸರನ್ನು ಜಾಗತಿಕ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಭಟ್ಕಳದ ಮೌಲಾನ ಲುಂಗಿ ಜಗತ್ತಿನಲ್ಲೇ ಹೆಸರು ಮಾಡಿದೆ. ಈಗ ಅದೇ ಕುಟುಂಬದ ಸದಸ್ಯನೊಬ್ಬ ತನ್ನ ಅಗಾಧ ಪ್ರತಿಭೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಿಂಚಿದ್ದಾರೆ. ಮೌಲಾನ ಲುಂಗೀಸ್ ನ ನಿರ್ದೇಶಕ ಹಾಗೂ ಮೀಟಾಲೆಕ್ಸ್ ಎಜೆನ್ಸೀಸ್ ಎರ್ನಾಕುಲಂ ನ ಭಾಗೀದಾರ ಎಸ್.ಎಂ.ಸೈಯದ್ ಮಸೂದ್ ರ ಪುತ್ರರಾಗಿರುವ ಮುಶ್ತಾಖ್ ಮಸೂದ್ ದುಬೈ ಇನ್ವೆಸ್ಟ್ಮೆಂಟ್ ಗ್ರೂಪ್ ಪಿ.ಜೆ.ಎಸ್.ಸಿ. ಯ ಸಿಎಫ್‌ಒ (ಚೀಫ್ ಫೈನಾನ್ಸ್ ಆಫಿಸರ್) ಹುದ್ದೆಯಲ್ಲಿದ್ದಾರೆ.
ಇವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ದುಬೈ ಇನ್ವೆಸ್ಟ್ಮೆಂಟ್ ಪಿಜೆಎಸ್ಸಿ ಕಂಪಿನಿಯ ಗ್ರೂಪ್ ಸಿ.ಎಫ್.ಒ. ಆಗಿರುವ ಇವರು ಹಣಕಾಸು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ. ಫೈನಾನ್ಶಿಯಲ್, ಇಂಡಸ್ಟ್ರಿಯಲ್ ಮತ್ತು ರಿಯಲ್ ಎಸ್ಟೇಟ್ ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಈ ಕಂಪನಿಯ ಸಂಪೂರ್ಣ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಇವರು, ತಮ್ಮ ಪ್ರತಿಭೆಯಿಂದಾಗಿ ಕಂಪನಿಯನ್ನು ಉತ್ತುಂಗಕ್ಕೇರುವಂತೆ ಮಾಡಿದ್ದಾರೆ. ಇದರ ಉಪಸಂಸ್ಥೆಗಳಾದ ಅಲ್ ಮಾಲ್ ಕ್ಯಾಪಿಟಲ್ ಪಿಎಸ್ಸಿ ಇದರ ಬೋರ್ಡ್ ಆಫ್ ಡೈರಕ್ಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸೈಯದ್ ಮುಶ್ತಾಖ್ ಕೇರಳದ ಎರ್ನಾಕುಲಂ ನ ಸೆಂಟ್ ಅಲ್ಬರ್ಟ್ ಕಾಲೇಜಿನಿಂದ ವಾಣಿಜ್ಯ ಪದವಿಯನ್ನು ಪಡೆದು 1989ರಲ್ಲಿ ಸಿ.ಎ. ಪದವಿಯನ್ನು ಪೂರ್ಣಗೊಳಿಸಿದರು. ನಂತರ ದುಬೈಗೆ ಉದ್ಯೋಗ ಅರಸಿ ಬಂದ ಇವರು, ಅಲ್ಲಿ ಆರ್ಥರ್ ಯಂಗ್ ಮತ್ತು ಆರ್ಥರ್ ಅಂಡ್ರಸೆನ್ ಕಂಪನಿಯಲ್ಲಿ ಆಡಿಟರ್ ಆಗಿ ನೇಮಕಗೊಂಡರು.
1992 ರಲ್ಲಿ ಅಬುಧಾಬಿಗೆ ಸ್ಥಳಾಂತರಗೊಂಡು ಅಲ್ಲಿನ ಪ್ರಸಿದ್ಧ ಪೆಟ್ರೋಲಿಯಂ ಕಂಪನಿ ಅಡ್ನೋಕ್ ಡಿಸ್ಟ್ರಿಬ್ಯೂಶನ್ ನಲ್ಲಿ ಆಂತರಿಕ ಆಡಿಟರ್ ಹುದ್ದೆಯನ್ನು ನಿರ್ವಹಿಸಿದರು. 1999 ರಲ್ಲಿ ಸೈಯದ್ ಮುಶ್ತಾಖ್ ಕುಪೋಲಾ ಗ್ರೂಪ್ ಸೇರಿ ಅಡಿಟಿಂಗ್ ನಿಂದ ಫೈನಾನ್ಸ್ ವಿಭಾಗದಲ್ಲಿ ತಮ್ಮ ಪ್ರಯಾಣವನ್ನು ಬೆಳೆಸಿದರು. ನಂತರ ಮಿಡ್ಲ್ ಈಸ್ಟ್ ಮತ್ತು ನಾರ್ತ್ ಆಫ್ರಿಕಾ (ಮೀನಾ) ದಲ್ಲಿ ಅಬರಾರ್ ಕ್ಯಾಪಿಟಲ್ ನೊಂದಿಗೆ ಗುರುತಿಸಿಕೊಂಡರು.