ಮಾನವ ಹಕ್ಕುಗಳ ಬಗ್ಗೆ ಅರಿವು ಅತ್ಯಗತ್ಯ: ನ್ಯಾ.ಆರ್.ಶಾರದ
ತುಮಕೂರು, ಮೇ 19: ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಶಾರದ ತಿಳಿಸಿದ್ದಾರೆ.
ತಿಪಟೂರಿನ ಕಲ್ಪತರು ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಹಾಸನದ ಶ್ರೀಗಂಧ ಸೇವಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ಅರಿವು, ರಕ್ಷಣೆ, ನೆರವು ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ವ್ಯಕ್ತಿ ತನಗೆ ಲಭ್ಯವಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಂಡಾಗ ಬದುಕು ಸುಗಮವಾಗುತ್ತದೆ ಹಾಗೂ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.ಈ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಯಾವುದೇ ವ್ಯಕ್ತಿಯನ್ನು ಪೊಲೀಸರು ಬಂಧಿಸಬೇಕಾದರೆ ಸಾಕಷ್ಟು ನಿಯಮಾವಳಿಗಳನ್ನು ಅನುಸರಿಸಬೇಕಾಗುತ್ತದೆ. ಏಕಾಏಕಿ ಯಾರನ್ನು ಪುರಾವೆಗಳಿಲ್ಲದೆ ಬಂಧಿಸುವಂತಿಲ್ಲ.ಈ ಬಗ್ಗೆಯೂ ಜನರಿಗೆ ಸಾಕಷ್ಟು ಮಾಹಿತಿ ಒದಗಿಸುವ ಕೆಲಸ ಆಗಬೇಕಾಗಿದೆ ಎಂದು ನ್ಯಾ.ಆರ್. ಶಾರದ ನುಡಿದರು.
ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್, ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜಕುಮಾರ್, ಶ್ರೀಗಂಧ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಹರೀಶ್ ಕೋಟೆ ಮಾತನಾಡಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಓಬಳೇಶಘಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಮಧುಮತಿ. ಮುಖ್ಯ ಸಂಯೋಜಕಿ ಶಾಂತ, ಶ್ರೀಗಂಧ ಸೇವಾಸಂಸ್ಥೆ ಕಾರ್ಯದರ್ಶಿ ಎಸ್.ಎಸ್. ರಂಗಸ್ವಾಮಿ, ಖಜಾಂಚಿ ಗಜೇಂದ್ರ ಉಪಸ್ಥಿತರಿದ್ದರು.