ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿಗೆ ಕೆ.ಪಿ.ಆರ್.ಎಸ್. ಒತ್ತಾಯ
ತುಮಕೂರು, ಮೇ 19: ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿ ಸರಕಾರಿ ಭೂಮಿ ಸಾಗುವಳಿಯಲ್ಲಿ ತೊಡಗಿರುವ ಬಡ ರೈತರನ್ನು ಸಂರಕ್ಷಿಸಲು ಮತ್ತು ಹಕ್ಕುಪತ್ರ ನೀಡಲು ಅಗತ್ಯ ಕ್ರಮವಹಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಕೆ.ಪಿ.ಆರ್.ಎಸ್. ನಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ಈ ಸಂದರ್ಭ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ. ಅಜ್ಜಪ್ಪ ಮಾತನಾಡಿ, ಕರ್ನಾಟಕ ರಾಜ್ಯವು ನಿರಂತರ ವಾಗಿ ಸತತ 5 ನೆ ವರ್ಷದ ಬರಗಾಲಕ್ಕೆ ತುತ್ತಾಗಿದೆ.ಈ ಭಾರಿಯ ಬರಗಾಲ ಕಳೆದ 30-40 ವರ್ಷಗಳ ಅವಧಿಯಲ್ಲಿ ಕಂಡರಿಯದ ಭೀಕರ ಬರಗಾಲವಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಮಳೆಯ ಅಭಾವದಿಂದಾಗಿ ತೀವ್ರ ನೀರಿನ ಕೊರತೆಯಿಂದ ಸಂಕಷ್ಟಕ್ಕೆ ತುತ್ತಾಗಿದೆ ಎಂದರು.
ರಾಜ್ಯದ ಗ್ರಾಮೀಣ ಜನತೆ ಇಂತಹ ಭೀಕರ ಸಂಕಷ್ಠದಲ್ಲಿರುವಾಗ ಜನತೆಯ ರಕ್ಷಣೆಗೆ ಧಾವಿಸುವ ಬದಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರರ ಮೇಲೆ ಆರೋಪಗಳನ್ನು ಹೊರಿಸಿಕೊಳ್ಳುತ್ತಾ ಜನತೆಯನ್ನು ಸಂಕಷ್ಟಕ್ಕೆ ದೂಡಿವೆ. ಸಾಲಬಾಧಿತ ರೈತರು, ಗೇಣಿದಾರರ, ಕೂಲಿಕಾರರ ಮತ್ತು ಕಸುಬುದಾರರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು, ಇವರ ಮಕ್ಕಳ ಶಾಲಾ-ಕಾಲೇಜು ಶುಲ್ಕ ಮನ್ನಾ ಮಾಡಬೇಕು, ಬೆಳೆ ನಷ್ಠ ಪರಿಹಾರ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ಒದಗಿಸಬೇಕು, ಉದ್ಯೋಗ ಖಾತ್ರಿ ಫಲಾನುಭವಿಗಳಿಗೆ ಉಳಿದ ದಿನಗಳ ನಿರುದ್ಯೋಗ ಭತ್ಯೆಯನ್ನು ಒದಗಿಸಬೇಕು, ಉದ್ಯೋಗ ಖಾತ್ರಿ ದಿನಗಳನ್ನು 200 ದಿನಗಳಿಗೆ ಮತ್ತು ನಗರ ಪ್ರದೇಶಗಳಿಗೆ ವಿಸ್ತರಿಸಿ ಹಾಗೂ ಕೂಲಿಯನ್ನು 600 ರೂ. ಗಳಿಗೆ ಹೆಚ್ಚಿಸಬೇಕು, ಸಮಸ್ಯೆ ಇರುವ ನಗರ ಹಾಗೂ ಗ್ರಾಮಗಳಿಗೆ ಅಗತ್ಯ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ವಹಿಸಬೇಕು ಎಂದು ಅಜ್ಜಪ್ಪ ಒತ್ತಾಯಿಸಿದರು. ಈ ಸಂದರ್ಭ ಹಲವರು ಉಪಸ್ಥಿತರಿದ್ದರು.