ಮೂರು ವರ್ಷಗಳ ಹಿಂದಿನ ಕೊಲೆ ಪ್ರಕರಣ: ಆರೋಪಿಗಳ ಸೆರೆ
ಚಿಕ್ಕಬಳ್ಳಾಪುರ, ಮೇ 19: ಕಳೆದ ಮೂರು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು, ಕೊಲೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಶಬ್ಬೀರ್, ಅಶ್ರಫ್, ರಹೀಂ ಮತ್ತು ಮುಹಮ್ಮದ್ ನೂರಲ್ಲಾ ಬಂಧಿತ ಆರೋಪಿಗಳಾಗಿದ್ದು, ಇವರಲ್ಲಿ ಶಬ್ಬೀರ್ ಆರೋಪಿಗಳೊಂದಿಗೆ ಸೇರಿ ಸ್ವಂತ ತಮ್ಮನನ್ನೇ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರದ ಹೊರವಲಯದಲ್ಲಿರುವ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, 2014ರ ಜುಲೈ 2 ರಂದು ಗುಡಿಬಂಡೆ ತಾಲೂಕಿನ ಚೆಂಡೂರು ಸಮೀಪದ ನೀಲಗಿರಿ ತೋಪಿನಲ್ಲಿ ಸುಮಾರು 25-30 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಗುಡಿಬಂಡೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.
ಕೊಲೆ ಮಾಡಿ ಪ್ರಕರಣವನ್ನು ಮರೆ ಮಾಚುವ ಉದ್ದೇಶದಿಂದ ಮೃತದೇಹದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಿ ಸುಟ್ಟಿದ್ದು, ಪ್ರಕಣದ ತನಿಖೆ ವೇಳೆ ಮೃತನ ಬೆರಳು ಮುದ್ರೆ ಸಂಗ್ರಹಿಸಿದ್ದು, ಇದರಿಂದ ಮೃತ ವ್ಯಕ್ತಿ ಯಾರು ಎಂಬುದು ಪತ್ತೆಯಾಗಲು ಸಹಕಾರಿಯಾಯಿತು ಎಂದು ಎಸ್‌ಪಿ ತಿಳಿಸಿದ್ದಾರೆ.
ಮೃತ ವ್ಯಕ್ತಿ ತಾಜ್ ಸೈಯದ್ ಎಂದು ಪತ್ತೆಯಾಗಿದ್ದು, ಈತನ ವಿರುದ್ಧ ಬೆಂಗಳೂರಿನ ಫ್ರೇಜರ್‌ಟೌನ್ ಪೊಲೀಸ್ ಠಾಣೆ, ಜೆಸಿ ನಗರ ಪೊಲೀಸ್ ಠಾಣೆ, ಭಾರತಿನಗರ ಪೊಲೀಸ್ ಠಾಣೆ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳವು ಪ್ರಕರಣಗಳು ದಾಖಲಾಗಿದ್ದು, ಹಳೇ ಆರೋಪಿ ಆಗಿರುವ ಕಾರಣ ಬೆರಳು ಮುದ್ರೆ ಸರಿಹೊಂದುವ ಮೂಲಕ ಮೃತನ ಸುಳಿವು ದೊರೆಯಿತು ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಆರೋಪಿ ಶಬ್ಬೀರ್ ನ ಪತ್ನಿಯೊಂದಿಗೆ ಮೃತ ತಾಜ್ ಸೈಯದ್ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ತಿಳಿದ ಶಬ್ಬೀರ್, ಇತರ ಮೂವರು ಸಹಚರರೊಂದಿಗೆ ಸೇರಿ ತಾಜ್ ನನ್ನು ಕೊಲೆ ಮಾಡಿ, ಚೆಂಡೂರು ಸಮೀಪದ ನೀಲಗರಿ ತೋಪಿನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿ ಸುಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಶಬ್ಬೀರ್ ವಿರುದ್ಧ ಗುಡಿಬಂಡೆ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಗುಡಿಬಂಡೆ ಸುತ್ತಮುತ್ತಲ ಪ್ರದೇಶದ ಸಂಪೂರ್ಣ ಅರಿವಿರುವ ಕಾರಣ ಶವವನ್ನು ಇಲ್ಲಿ ತಂದು ಹಾಕಿರುವುದಾಗಿ ತಿಳಿಸಿದ್ದಾರೆ.
ಪ್ರಕರಣ ಭೇದಿಸಿದ ಗುಡಿಬಂಡೆ ವೃತ್ತ ನಿರೀಕ್ಷಕ ಜೆ. ಗೌತಮ್, ಪಿಎಸ್‌ಐ ಪಾಪಣ್ಣ ಹಾಗೂ ಸಿಬ್ಬಂದಿಯಾದ ರಮಣಾರೆಡ್ಡಿ, ನರಸಿಂಹ ಮೂರ್ತಿ, ನರಸಿಂಹಯ್ಯ, ಅನ್ಸರ್ ಪಾಷ, ಅಬ್ದುಲ್ ಘನಿ, ಮಕಾನದಾರ್ ಅವರನ್ನು ಅಭಿನಂದಿಸಿರುವ ಎಸ್‌ಪಿ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಪ್ರಶಂಸಾ ಪತ್ರದ ಜೊತೆಗೆ ತಂಡಕ್ಕೆ 5 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.