×
Ad

ಎರಡು ತಿಂಗಳೊಳಗೆ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿ: ಸಚಿವ ಕಾಗೋಡು

Update: 2017-05-19 23:00 IST

ಅರ್ಜಿಯ ಸ್ಥಿತಿಗತಿ ಪರಿಶೀಲನೆಗೆ ಸೂಚನೆ
 ಸಾಗರ, ಮೇ 19: ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವವರು ಎರಡು ತಿಂಗಳೊಳಗೆ ತಹಶೀಲ್ದಾರ್‌ರಿಗೆ ಅರ್ಜಿ ಸಲ್ಲಿಸಿ, ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದುಕೊಳ್ಳಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಉಪವಿಭಾಗ ಮಟ್ಟದ ಪಾರಂಪಾರಿಕ ಅರಣ್ಯಹಕ್ಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.


2005ರ ಹಿಂದೆ ಸ್ವಾಧೀನದಲ್ಲಿರುವ, 75 ವರ್ಷ ವಾಸವಿದ್ದವರಿಗೆ ಹಕ್ಕುಪತ್ರ ನೀಡಲಾಗುವುದು. ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದವರು ಮಾತ್ರ ಪಾರಂಪರಿಕ ಅರಣ್ಯಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಸಾಧ್ಯ ಎಂದು ತಿಳಿಸಿದ್ದಾರೆ.


 ಗ್ರಾಮ ಅರಣ್ಯಹಕ್ಕು ಸಮಿತಿಗಳ ರಚನೆ ಸಂದರ್ಭದಲ್ಲಿ ಸಮಿತಿಯಲ್ಲಿರುವವರಿಗೆ ಸೂಕ್ತ ಮಾರ್ಗದರ್ಶನ ಇಲ್ಲದೆ ಇರುವುದರಿಂದ ಕಾಯ್ದೆ ಅನುಷ್ಠಾನಕ್ಕೆ ತೀವ್ರ ವಿಳಂಬವಾಗುತ್ತಿದೆ. ಗ್ರಾಮಸಭೆಯಲ್ಲಿ ಅರಣ್ಯಹಕ್ಕು ಕಾಯ್ದೆ ಸಂಬಂಧ ಹಕ್ಕುಪತ್ರ ಕೋರಿ ಬಂದಿರುವ ಅರ್ಜಿಯನ್ನು ಮಂಡಿಸಿ, ಅಲ್ಲಿ ಅಂತಿಮಗೊಳಿಸಬೇಕು. ಅದನ್ನು ಉಪವಿಭಾಗೀಯ ಸಮಿತಿಗೆ ಕಳುಹಿಸಿಕೊಡಬೇಕು ಎಂದು ತಿಳಿಸಿದ್ದಾರೆ.

ಅರ್ಜಿಯನ್ನು ಗ್ರಾಮ ಅರಣ್ಯಹಕ್ಕು ಸಮಿತಿ ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು. ಒಂದೊಮ್ಮೆ ತಿರಸ್ಕರಿಸುವ ಹಂತದಲ್ಲಿದ್ದರೆ ಸಂಬಂಧಪಟ್ಟ ಅರ್ಜಿದಾರನಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಬಂದ ಅರ್ಜಿಯನ್ನು ಉಪವಿಭಾಗೀಯ ಹಂತದ ಸಮಿತಿಗೆ ಕಳುಹಿಸಿಕೊಡಬೇಕು. ಕಾನೂನು ವ್ಯಾಪ್ತಿಯಲ್ಲಿ ಯೋಜನೆಯಡಿ ಜನರಿಗೆ ಭೂಮಿಹಕ್ಕು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಕೆಲವು ಕಡೆಗಳಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಯನ್ನು ನಡೆಸುತ್ತಿಲ್ಲ ಎನ್ನುವ ದೂರು ಇರುವ ಹಿನ್ನೆಲೆಯಲ್ಲಿ ಪಿಡಿಒಗಳು ಗ್ರಾಮಸಭೆಯನ್ನು ಕರೆದು ಫಲಾನುಭವಿಗಳ ಆಯ್ಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಪ್ರತಿ ಹೋಬಳಿಯಲ್ಲಿ ಅರಣ್ಯಹಕ್ಕು ಕಾಯ್ದೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಮೇಲುಸ್ತುವಾರಿ ನೋಡಿಕೊಳ್ಳಲು ನೋಡಲ್ ಅಧಿಕಾರಿ ನೇಮಕ ಹಾಗೂ ವಿಶೇಷ ಸಮಿತಿ ರಚಿಸಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಜಿಯ ಸ್ಥಿತಿಗತಿ ಪರಿಶೀಲನೆಗೆ ಸಚಿವರು ಸೂಚನೆ ನೀಡಿದರು. ಸರಕಾರ ಅರಣ್ಯಹಕ್ಕು ಸಮಿತಿಯಲ್ಲಿ ಗ್ರಾಮದ ಜನರನ್ನೇ ಅಧ್ಯಕ್ಷರು ಹಾಗೂ ಸದಸ್ಯರನ್ನಾಗಿ ನೇಮಿಸಿದೆ.

ಈ ಸಮಿತಿಯು ನ್ಯಾಯಾಲಯವಿದ್ದಂತೆ. ಯಾವುದೇ ಕಾರಣಕ್ಕೂ ಅನರ್ಹರಿಗೆ ಭೂಮಿ ಸಿಗಬಾರದು. ಸರಕಾರ ಸಮಿತಿ ಸದಸ್ಯರ ಮೇಲೆ ಇರಿಸಿರುವ ನಂಬಿಕೆಗೆ ದ್ರೋಹವಾಗದಂತೆ ನಡೆದುಕೊಳ್ಳಬೇಕು. ಭೂಮಿ ಸಿಗುತ್ತದೆ ಎಂದರೆ ಕೆಲವರು ಕಾನೂನನ್ನು ತಮ್ಮ ಪರವಾಗಿ ತಿರುಚುತ್ತಾರೆ. ಸಮಿತಿಯಲ್ಲಿದ್ದವರು ಸಂಬಂಧಿಗಳೆಂದು ನೋಡದೆ ಪ್ರಾಮಾಣಿಕವಾಗಿ ಅರಣ್ಯದಲ್ಲಿ ಲಾಗಾಯ್ತಿನಿಂದ ವಾಸವಿರುವ, ಸಾಗುವಳಿ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅರಣ್ಯಹಕ್ಕು ಕಾಯ್ದೆಯಡಿ ಭೂ ಮಂಜೂರಾತಿಗೆ ಹಿಡುವಳಿ ಮಿತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಕಾಯ್ದೆಯಡಿ 10 ಎಕರೆ ಕೊಡಲು ಅವಕಾಶವಿದ್ದರೂ ಸರಕಾರ ಅದನ್ನು 3 ಎಕರೆಗೆ ಮಿತಿಗೊಳಿಸಿದೆ ಎಂದರು. 94ಸಿ ಯೋಜನೆಯಡಿ ನಗರ ಪ್ರದೇಶದ ಗಡಿಯಿಂದ 3 ಕಿ.ಮೀ. ಸುತ್ತಳತೆಯಲ್ಲಿ ಸರಕಾರಿ ಭೂಮಿಯಲ್ಲಿ ವಾಸವಿರುವವರಿಗೆ ಹಕ್ಕುಪತ್ರ ನೀಡಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಇನ್ನೆರಡು ತಿಂಗಳು ಅವಧಿಯನ್ನು ವಿಸ್ತರಿಸಲಾಗಿದೆ ಎಂದರು.

ಉಪವಿಭಾಗಾಧಿಕಾರಿ ನಾಗರಾಜ್ ಸಿಂಗ್ರೇರ್, ತಹಶೀಲ್ದಾರ್ ತುಷಾರ್ ಬಿ. ಹೊಸೂರು, ಡಿಎಫ್‌ಒ ಮೋಹನ್ ಗಂಗೊಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಣಪತಿ, ತಾಪಂ ಇಒ ಸಿದ್ದಲಿಂಗಯ್ಯ, ಬಗರ್‌ಹುಕುಂ ಸಮಿತಿಯ ಅಧ್ಯಕ್ಷ ಬಿ.ಆರ್. ಜಯಂತ್, ತಾಪಂ ಸದಸ್ಯೆ ಜ್ಯೋತಿ ಮತ್ತಿತರರಿದ್ದರು.

ಪರಿಭಾವಿತ ಅರಣ್ಯ ಪ್ರದೇಶ ಎನ್ನವುದನ್ನು ಕೈಬಿಡಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮೇ 24ಕ್ಕೆ ನಡೆಯುವ ಸಚಿವ ಸಂಪುಟದಲ್ಲಿ ಈ ಕುರಿತು ಅಂತಿಮ ಹಂತದ ಚರ್ಚೆ ನಡೆಯಲಿದೆ. ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರ ಹುದ್ದೆ ಕೊರತೆ ಇದ್ದು, ಭಡ್ತಿ ನೀಡಲು ಕಂದಾಯ ನಿರೀಕ್ಷಕರ ಕೊರತೆ ಇದೆ. ಅಲ್ಲಿಯವರೆಗೆ ತಾತ್ಕಾಲಿಕ ಭಡ್ತಿ ನೀಡುವ ಬಗ್ಗೆ ಸಹ ಚಿಂತನೆ ನಡೆಸಲಾಗಿದೆ.
ಕಾಗೋಡು ತಿಮ್ಮಪ್ಪ, ಸಚಿವ

‘ಅಧಿಕಾರಿಗಳ ವಿಳಂಬ ಧೋರಣೆ ಅಭಿವೃದ್ಧಿಗೆ ಕುಂಠಿತ’
ಸೊರಬ: ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಅರಣ್ಯ ಹಕ್ಕು ಸಮಿತಿಗಳ ನಿರ್ಲಕ್ಷ್ಯದಿಂದ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮಂಜೂರಾತಿಗಾಗಿ ಬಂದಿರುವ ಅರ್ಜಿಗಳು ವಿಲೇವಾರಿಯಾಗದೇ ಹಳ್ಳ ಹಿಡಿದಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪಟ್ಟಣದ ರಂಗಮಂದಿರದಲ್ಲಿ ತಾಲೂಕು ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕುಮಾನ್ಯ ಮಾಡುವ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಅಧಿಕಾರಿಗಳ ವಿಳಂಬ ಧೋರಣೆಯಿಂದ ಸಾರ್ವಜನಿಕರ ಕೆಲಸಕ್ಕೆ ಹಿನ್ನಡೆಯಾಗಿದೆ. ಅರಣ್ಯ ಹಕ್ಕು ಕಾನೂನು ಜಾರಿಗೆ ಬಂದಾಗ ಕಾರ್ಯಾಗಾರ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೆ ಪುನಃ ಅಂತಹವರ ಅರ್ಜಿಗಳನ್ನು ಪಡೆಯಬಹುದು ಎಂದರು.


ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಸಲ್ಲಿಸಿ ವಾಸವಾಗಿರುವ ಅರಣ್ಯ ವಾಸಿಗಳಿಗೆ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯವರು ಮುಂದಾದರೆ ಅಂತಹ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ ಎಂದರು.


ಈ ಸಂದರ್ಭ ಶಾಸಕ ಮಧುಬಂಗಾರಪ್ಪ, ಉಪವಿಭಾಗಾಧಿಕಾರಿ ನಾಗರಾಜ್ ಸಿಂಗ್ರೇರ್, ತಹಶೀಲ್ದಾರ್ ಚಂದ್ರಶೇಖರ್, ಎಸಿಎಫ್ ಶ್ರೀನಿವಾಸ್ ಯರಡೋಣಿ, ಸಮಾಜಕಲ್ಯಾಣಾಧಿಕಾರಿ ರವಿಕುಮಾರ್, ಜಿಪಂ ಅರಣ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಲಿಂಗೇಗೌಡ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News