ಶಿವಮೊಗ್ಗ ಬ್ಯಾಂಕ್ ನಿಂದ ರೈತರಿಗೆ ವಂಚನೆ: ದೂರು
ಶಿವಮೊಗ್ಗ, ಮೇ 20: ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಶಾಖೆಯಲ್ಲಿ ರೈತರಿಗೆ ಲಕ್ಷಾಂತರ ರೂ. ಸಾಲ ಮಂಜೂರು ಮಾಡಿ, ಆ ಹಣವನ್ನು ರೈತರಿಗೆ ನೀಡದೆ ಬೇರೆಯವರ ಖಾತೆಗೆ ವರ್ಗಾವಣೆ ಮಾಡಿ ಕೋಟಿ ಕೋಟಿ ರೂ. ವಂಚಿಸಿದ್ದಾರೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಶಾಖೆಗೆ ಪೊಲೀಸ್ ಅಧಿಕಾರಿಗಳು ಶನಿವಾರ ಭೇಟಿನೀಡಿ ಪರಿಶೀಲನೆ ನಡೆಸಿದರು.
ಡಿವೈಎಸ್‌ಪಿ ಪಂಪಾಪತಿ, ದೊಡ್ಡಪೇಟೆ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್, ಸಬ್ ಇನ್ಸ್‌ಪೆಕ್ಟರ್ ಅಭಯಪ್ರಕಾಶ್ ಸೋಮನಾಳ್ ಮತ್ತು ಸಿಬ್ಬಂದಿ ಬ್ಯಾಂಕ್‌ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಈ ಹಗರಣದ ಬಗ್ಗೆ ಮಧ್ಯಾಹ್ನದವರೆಗೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ಇನ್ನಷ್ಟೆ ದೂರು ದಾಖಲಾಗಬೇಕಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರ್ಪೋರೇಷನ್ ಬ್ಯಾಂಕ್ ಮುಖ್ಯ ಕಚೇರಿಯು, ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಏನೀದು ವಂಚನೆ?: ಶಿವಮೊಗ್ಗ ತಾಲೂಕಿನ ಕೊಮ್ಮನಾಳು, ಹರಮಘಟ್ಟ, ಹಾಡೋನಹಳ್ಳಿ, ಬೀರನಹಳ್ಳಿ, ಚಿಕ್ಕಕೂಡ್ಲಿ, ಸೂಗೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ನಾನಾ ದಾಖಲಾತಿಗಳೊಂದಿಗೆ ಸಾಲಕ್ಕಾಗಿ ಕಳೆದ ಕೆಲ ತಿಂಗಳುಗಳ ಹಿಂದೆ ಕಾರ್ಪೋರೇಷನ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಹಲವು ದಿನಗಳಿಂದ ಸಾಲ ಮಂಜೂರಾಗಿಲ್ಲವೆಂದು ಬ್ಯಾಂಕ್‌ನವರು ಹೇಳುತ್ತಿದ್ದರು.
ಬ್ಯಾಂಕ್‌ನವರ ವರ್ತನೆಯಿಂದ ಅನುಮಾನಗೊಂಡ ಕೆಲ ರೈತರು ಪಾಸ್ ಪುಸ್ತಕದಲ್ಲಿ ತಮ್ಮ ಖಾತೆಯ ವಹಿವಾಟು ದಾಖಲು ಮಾಡಿಕೊಡುವಂತೆ ಕೋರಿದ್ದಾರೆ. ಇದಕ್ಕೆ ಬ್ಯಾಂಕ್‌ನವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನಲಾಗಿದ್ದು, ಕೆಲ ರೈತರು ಪಟ್ಟು ಹಿಡಿದು ಪಾಸ್ ಪುಸ್ತಕದಲ್ಲಿ ವಹಿವಾಟಿನ ದಾಖಲು ಪಡೆದುಕೊಂಡಾಗ, ತಮಗೆ ಲಕ್ಷಾಂತರ ರೂ. ಸಾಲ ಮಂಜೂರಾಗಿ ಖಾತೆಗಳಿಂದ ಹಣ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ವಿಷಯ ಇತರೆ ರೈತರಿಗೂ ಅರಿವಿಗೆ ಬಂದು ಅವರು ಕೂಡ ಪಾಸ್ ಪುಸ್ತಕ ದಾಖಲು ಅಪ್‌ಡೇಟ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಸಾಲ ಮಂಜೂರಾಗಿ ಖಾತೆಗಳಿಂದ ಲಕ್ಷಾಂತರ ರೂ. ಡ್ರಾ ಆಗಿರುವುದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಬ್ಯಾಂಕ್ ಮುಂಭಾಗ ಜಮಾಯಿಸಿ, ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಈ ಪ್ರಕರಣ ಸಾರ್ವಜನಿಕವಾಗಿ ಬಯಲಾಗುವಂತಾಗಿದೆ ಎಂದು ರೈತರು ವಿವರಿದ್ದಾರೆ.
ಗೊತ್ತೇ ಇಲ್ಲ!: ರೈತರ ದಾಖಲೆಗಳ ಆಧಾರದ ಮೇಲೆ ಅಡಮಾನ ಸಾಲ, ಕೃಷಿ ಸಾಲ ಹಾಗೂ ಜಮೀನು ಅಭಿವೃದ್ದಿ ಸಾಲಗಳನ್ನು ಮಂಜೂರು ಮಾಡಲಾಗಿದೆ. ಕನಿಷ್ಠ 5 ಲಕ್ಷದಿಂದ ಗರಿಷ್ಠ 28 ಲಕ್ಷ ರೂ.ಗಳವರೆಗೂ ಸಾಲ ಮಂಜೂರಾಗಿದೆ. ಆದರೆ ಬಹುತೇಕ ರೈತರಿಗೆ ಸಾಲ ಮಂಜೂರಾಗಿರುವ ವಿಷಯವೇ ಗೊತ್ತಿಲ್ಲವಾಗಿದೆ!
ಆದರೆ ಅವರ ಖಾತೆಗೆ ಜಮಾ ಆಗಿದ್ದ ಹಣದಲ್ಲಿ ಒಂದಿಷ್ಟು ಹಣವು ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದೆ. ಚಿಕ್ಕ ಕೂಡ್ಲಿ ಗ್ರಾಮದ ರೈತರೊಬ್ಬರು ತಮ್ಮ ಜಮೀನಿನ ಮೇಲೆ 6 ಲಕ್ಷ ರೂ. ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ 16 ಲಕ್ಷ ರೂ. ಸಾಲ ಮಂಜೂರಾಗಿದೆ. ಹರಮಘಟ್ಟ ಗ್ರಾಮದ ಈರ್ವರು ರೈತರ ಜಂಟಿ ಖಾತೆಗೆ 28 ಲಕ್ಷ ರೂ. ಸಾಲ ಮಂಜೂರಾಗಿದ್ದು, ಆ ರೈತರು ಖಾತೆಯಿಂದ ಡ್ರಾ ಮಾಡಿಕೊಂಡಿದ್ದು ಕೇವಲ 8 ಲಕ್ಷ ರೂ. ಮಾತ್ರವಾಗಿದೆ ಎಂದು ವಂಚನೆಗೊಳಗಾದ ರೈತ ಸಮೂಹ ಆರೋಪಿಸುತ್ತದೆ.
ಕಂಗಾಲು: ತಮ್ಮ ಖಾತೆಯಿಂದ ಲಕ್ಷಾಂತರ ರೂ. ಸಾಲದ ಹಣ ಅನಧಿಕೃತವಾಗಿ ಬೇರೊಬ್ಬರ ಖಾತೆಗೆ ವರ್ಗಾವಣೆ ಯಾಗಿರುವುದರ ಮಾಹಿತಿ ಅರಿತ ರೈತ ಸಮೂಹ ಕಂಗಾಲಾಗಿದ್ದು, ಆತಂಕಕ್ಕೀಡಾಗಿದೆ. ತಮಗೆ ಸೂಕ್ತ ನ್ಯಾಯ ಕಲ್ಪಿಸಿ ಕೊಡಬೇಕೆಂದು ಬ್ಯಾಂಕ್‌ನವರಿಗೆ ಆಗ್ರಹಿಸುತ್ತಿದ್ದಾರೆ. ರೈತರಿಗೆ ವಂಚಿಸಿದವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ರೈತ ಸಮೂಹ ಆಗ್ರಹಿಸಿದೆ.
8 ಕೋಟಿ ರೂ. ವಂಚನೆ!
ಬಿ.ಹೆಚ್.ರಸ್ತೆಯ ಕಾರ್ಪೋರೇಷನ್ ಬ್ಯಾಂಕ್ ಶಾಖೆಯಲ್ಲಿ ರೈತರ ಬ್ಯಾಂಕ್ ದಾಖಲೆಗಳ ಆಧಾರದ ಮೇಲೆ ಅವರು ಕೋರಿದ್ದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಸಾಲ ಮಂಜೂರು ಮಾಡಿ, ಅವರ ಖಾತೆಯಿಂದ ಅನಧಿಕೃತವಾಗಿ ಬೇರೊಬ್ಬರ ಖಾತೆಗೆ ಹಣ ವರ್ಗಾವಣೆಯಾದ ಹಗರಣದ ಮೊತ್ತ ಹಾಗೂ ವಂಚನೆಗೊಳಗಾದ ರೈತರ ವಿವರವನ್ನು ಬ್ಯಾಂಕ್ ಅಧಿಕಾರಿಗಳು ಸಂಗ್ರಹಿಸಲಾರಂಭಿಸಿದ್ದಾರೆ.
ಈ ನಡುವೆ ವಂಚನೆಯ ಮೊತ್ತವು ಸರಿಸುಮಾರು 8 ಕೋಟಿ ರೂ.ಗಳಿಗೂ ಅಧಿಕವೆಂದು ಹೇಳಲಾಗುತ್ತಿದ್ದು, ಇದು ಇಡೀ ಬ್ಯಾಂಕಿಂಗ್ ವಲಯವನ್ನೇ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಈ ವಂಚನೆಯಲ್ಲಿ ಕೆಲ ಬ್ಯಾಂಕ್ ಸಿಬ್ಬಂದಿಗಳೇ ಭಾಗಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಆಂಧ್ರದ ಮೂರ್ನಾಲ್ಕು ಜನರ ಖಾತೆಗೆ ಹಣ ವರ್ಗಾವಣೆ:
ರೈತರ ಖಾತೆಗಳಿಂದ ಡ್ರಾ ಮಾಡಿದ ಹಣವನ್ನು ಆಂಧ್ರಪ್ರದೇಶ ಮೂಲದ ಮೂರ್ನಾಲ್ಕು ವ್ಯಕ್ತಿಗಳ ಖಾತೆಗೆ ಜಮಾ ಆಗಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಪ್ರಮುಖವಾಗಿ ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಕೋಟಯ್ಯ ಎಂಬುವರಿಗೆ ವರ್ಗಾವಣೆ ಮಾಡಲಾಗಿದೆ. ಇವರೆಲ್ಲ ಯಾರು? ಅವರ ಖಾತೆಗೆ ವರ್ಗಾವಣೆಯಾಗಿರುವ ಮೊತ್ತವೆಷ್ಟು? ಪ್ರಸ್ತುತ ಖಾತೆಯಲ್ಲಿರುವ ಮೊತ್ತವೆಷ್ಟು? ಎಂಬಿತ್ಯಾದಿ ವಿವರಗಳು ಉನ್ನತ ಮಟ್ಟದ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.
ಇಬ್ಬರು ಬ್ಯಾಂಕ್ ಸಿಬ್ಬಂದಿಗಳ ಅಮಾನತ್ತು?
ಭಾರೀ ಮೊತ್ತದ ಹಗರಣ ಬಯಲಿಗೆ ಬರುತ್ತಿದ್ದಂತೆ ಬ್ಯಾಂಕ್ ಶಾಖೆಯ ಈ ಹಿಂದಿದ್ದ ವ್ಯವಸ್ಥಾಪಕರು ಹಾಗೂ ಕೃಷಿ ಕ್ಷೇತ್ರಾಧಿಕಾರಿ ಯೋರ್ವರನ್ನು ಬ್ಯಾಂಕ್ ಆಡಳಿತ ಮಂಡಳಿ ಅಮಾನತ್ತುಗೊಳಿಸಿದೆ. ಕೃಷಿ ಕ್ಷೇತ್ರ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ, ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದ ಮಧುಸೂದನ್‌ರಾವ್ ಮತ್ತು ವ್ಯವಸ್ಥಾಪಕರಾಗಿದ್ದ ಪ್ರಸ್ತುತ ಉಡುಪಿಯ ಪ್ರಧಾನ ಕಚೇರಿಗೆ ವರ್ಗಾವಣೆಗೊಂಡಿದ್ದ ಕೃಷ್ಣಮೂರ್ತಿ ಅಮಾನತ್ತುಗೊಂಡವರಾಗಿದ್ದಾರೆ ಎಂದು ಬ್ಯಾಂಕ್ ಮೂಲಗಳು ಮಾಹಿತಿ ನೀಡಿವೆ.
ಸುಮಾರು 27 ರೈತರಿಗೆ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಬ್ಯಾಂಕ್ ಮೂಲಗಳು ಹೇಳುತ್ತವೆ