ಬಿಜೆಪಿ ಅತೃಪ್ತ ಮುಖಂಡರೊಂದಿಗೆ ಮುರುಳೀಧರ್‌ರಾವ್ ಸಮಾಲೋಚನೆ : ಯಡಿಯೂರಪ್ಪನವರ ವಿರುದ್ಧ ದೂರುಗಳ ಸುರಿಮಳೆ
ಬೆಂಗಳೂರು, ಮೇ 20: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ನಾಯಕರಲ್ಲಿ ಉಂಟಾಗಿರುವ ಅಸಮಾಧಾನ ಅತೃಪ್ತಿಗೆ ಇತಿಶ್ರೀ ಹಾಡಲು ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಮುರುಳೀಧರರಾವ್ ಅವರು ಶನಿವಾರ ಅತೃಪ್ತ ಮುಖಂಡರೊಡನೆ ಸಮಾಲೋಚನೆ ನಡೆಸಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಶನಿವಾರ ಬೆಳಗ್ಗೆಯೇ ನಡೆದ ಸಮಾಲೋಚನಾ ಸಭೆಯಲ್ಲಿ ಅತೃಪ್ತ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಭಾನುಪ್ರಕಾಶ್, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನ ಮರದ, ಮುಖಂಡರಾದ ನಂದೀಶ್, ವಿಮಲ್‌ಕುಮಾರ್ ಸುರಾನ, ಶಿವಯೋಗಿಸ್ವಾಮಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.
ದೂರುಗಳ ಸುರಿಮಳೆ: ಪಕ್ಷದ ಅಧ್ಯಕ್ಷರ ವಿರುದ್ದ ಅತೃಪ್ತ ಮುಖಂಡರು ಮುರಳೀಧರರಾವ್ ಅವರ ಮುಂದೆ ದೂರುಗಳ ಸುರಿ ಮಳೆಯನ್ನೆ ಸುರಿಸಿದ್ದು, ಅಧ್ಯಕ್ಷರ ಜತೆಯಿರುವ ಕೆಲ ಮುಖಂಡರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಎಲ್ಲವನ್ನೂ ನಿಯಂತ್ರಿಸುವ ಪ್ರಯತ್ನ ನಡೆಸಿದ್ದಾರೆ. ಅವರಿಗೆ ಬುದ್ದಿ ಹೇಳಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಈ ಮುಖಂಡರುಗಳು ಸಂಸದೆ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಕರಂದ್ಲಾಜೆ ವಿರುದ್ದ ನೇರವಾಗಿಯೇ ದೂರು ನೀಡಿದರು ಎಂದು ಮೂಲಗಳು ಹೇಳಿವೆ.
ಪಕ್ಷದ ಅಧ್ಯಕ್ಷರಾದ ಯಡಿಯೂರಪ್ಪನವರ ಬಗ್ಗೆ ನಮ್ಮದೇನು ತಕರಾರಿಲ್ಲ. ಅವರೇ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಿಂದೆ ಕೆಜೆಪಿಗೆ ಬಾರದೆ ಕೈಕೊಟ್ಟ ಕೆಲ ನಾಯಕರ ವಿರುದ್ದ ಸಂಸದೆ ಶೋಭಾಕರಂದ್ಲಾಜೆ ಅವರು ಸೇಡಿನ ಮನೋಭಾವ ತೋರುತ್ತಿದ್ದಾರೆ. ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು ಎನ್ನಲಾಗಿದೆ.
ಪಕ್ಷದ ವರಿಷ್ಠರ ನಿರ್ಧಾರಗಳಿಗೆ ನಾವು ಬದ್ದ. ಅವರ ಅಣತಿಯಂತೆ ನಡೆದುಕೊಳ್ಳುತ್ತೇವೆ. ಯಡಿಯೂರಪ್ಪನವರ ಸುತ್ತಲಿನ ಕೆಲ ನಾಯಕರನ್ನು ನಿಯಂತ್ರಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂಬ ಮಾತುಗಳನ್ನು ಕೆಲ ನಾಯಕರು ಹೇಳಿದರು ಎಂದು ಗೊತ್ತಾಗಿದೆ.
ಖಡಕ್‌ಸೂಚನೆ: ಅತೃಪ್ತ ನಾಯಕರ ದೂರುಗಳಿಗೆ ಕಿವಿಗೊಟ್ಟ ಮುರುಳೀಧರರಾವ್ ಅವರು ಎಲ್ಲವನ್ನೂ ಸರಿಪಡಿಸುತ್ತೇನೆ. ಯಾರೂ ಕೂಡ ಬಹಿರಂಗವಾಗಿ ಅಧ್ಯಕ್ಷರ ವಿರುದ್ದ ಮಾತನಾಡಬಾರದು. ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದರು ಎನ್ನಲಾಗಿದೆ.
ಯಾವುದೇ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಿ. ಅದು ಬಿಟ್ಟು ಬಹಿರಂಗವಾಗಿ ಸಭೆ ನಡೆಸುವುದು, ಹೇಳಿಕೆ ನೀಡುವುದನ್ನು ಮಾಡಿದರೆ ಸಹಿಸುವುದಿಲ್ಲ. ಅದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಖಡಕ್ ಸಂದೇಶ ನೀಡಿರುವುದನ್ನು ಅತೃಪ್ತ ಮುಖಂಡರ ಗಮನಕ್ಕೆ ತಂದರು ಎನ್ನಲಾಗಿದೆ.
ಬ್ರಿಗೇಡ್ ಬಂದ್: ಇದೇ ಸಂದರ್ಭದಲ್ಲಿ ರಾಯಣ್ಣ ಬ್ರಿಗೇಡ್‌ನ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎನ್ನುವ ವರಿಷ್ಠರ ಸಂದೇಶವನ್ನು ಈಶ್ವರಪ್ಪಗೆ ಮುರುಳೀಧರರಾವ್ ತಲುಪಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.
ಬರ ಪ್ರವಾಸದ ಸಂದರ್ಭದಲ್ಲಿ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದೇ ಒಗ್ಗಟ್ಟು ಮುಂದಿನ ಚುನಾವಣೆಗೂ ಮುಂದುವರೆಯಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಪಕ್ಷ ಸಂಘಟನೆಗೆ ಮುಂದಾಗಿ ಎಂದು ಮುರುಳೀಧರರಾವ್ ಸಭೆಯಲ್ಲಿ ಅತೃಪ್ತ ಮುಖಂಡರಿಗೆ ಕಿವಿಮಾತು ಹೇಳಿದರು ಎನ್ನಲಾಗಿದೆ.