×
Ad

ಲೋಕಾಯುಕ್ತದ ಮುಂದೆ 6,500 ಪ್ರಕರಣಗಳು: ನ್ಯಾ.ವಿಶ್ವನಾಥ್ ಶೆಟ್ಟಿ

Update: 2017-05-20 23:07 IST

ಚಿಕ್ಕಮಗಳೂರು, ಮೇ 20: ಲೋಕಾಯುಕ್ತ ನ್ಯಾಯಾಲಯದಲ್ಲಿ 6,500 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. 2006ರಿಂದ 2,400 ಪ್ರಕರಣಗಳ ವಿಚಾರಣೆಯಾಗಬೇಕಿತ್ತು. ತಾನು ಬಂದ ಮೇಲೆ ವಿಚಾರಣಾಧಿಕಾರಿಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ. 1,700 ಪ್ರಕರಣಗಳು ಈಗ ತಮ್ಮ ಮುಂದೆ ಇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ.


ಶನಿವಾರ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನತೆಯ ಉಪಯೋಗ ಹಾಗೂ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹೊಣೆಗಾರಿಕೆಯನ್ನು ಆಡಳಿತ ತೋರಬೇಕಿದೆ. ಅದರಲ್ಲಿ ಹಿನ್ನಡೆಯಾದರೆ ಸರಕಾರಿ ಸೌಲಭ್ಯ ಅಗತ್ಯ ಇರುವವರಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.


ಅಧಿಕಾರಿಗಳನ್ನು ಹೆದರಿಸಿ ಅವರ ಹೊಣೆ ನಿರ್ವಹಿಸುವಂತೆ ಮಾಡುವುದು ಒಂದು ಮಾರ್ಗ. ಅದಕ್ಕಿಂತ ಉತ್ತಮ ವಾದುದು ಅವರನ್ನು ವಿಶ್ವಾಸಕ್ಕ ತೆಗೆದುಕೊಂಡು ಅವರ ಕೆಲಸವನ್ನು ಅವರು ಮಾಡುವಂತೆ ಬಿಡುವುದಾಗಿದೆ. ಅಧಿಕಾರಿ, ಸಿಬ್ಬಂದಿ ಸಾರ್ವಜನಿಕರ ಹಣದ ಮೂಲಕ ಬದುಕು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಹೊಣೆ ನಿರ್ವ ಹಣೆಗೆ ಅವರು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಾವು ಜಿಲ್ಲೆಯಲ್ಲಿ ಸಂಚರಿಸುತ್ತಿರುವುದಾಗಿ ತಿಳಿಸಿದರು.
ತಾವು ಪ್ರವಾಸ ಕೈಗೊಂಡ ಜಿಲ್ಲೆಗಳಲ್ಲಿ ಬಹುತೇಕ ಯುವ ಅಧಿಕಾರಿಗಳಿದ್ದಾರೆ.

ಜಿಲ್ಲಾಧಿಕಾರಿ, ಜಿಪಂ ಸಿಇಒ ಉತ್ಸಾಹಗಳಿಂದ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಇಲ್ಲಿಯ ಜಿಲ್ಲಾಧಿಕಾರಿಗಳೂ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದು ಅವರ ಮಾತಿನ ಧಾಟಿಯಲ್ಲಿಯೇ ತಿಳಿಯಬಹುದು. ಉಳಿದಿಬ್ಬರು ಕೂಡ ಯುವಕರಾಗಿದ್ದಾರೆ ಎಂದು ಪ್ರಶಂಶಿಸಿದರು.
‘ನಾನು ಭೇಟಿ ನೀಡಿದ ವೇಳೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಮಾಡುತ್ತಿಲ್ಲ.

ಅದಕ್ಕೆ ಹಿರಿಯ ಅಧಿಕಾರಿಗಳು, ಉಸ್ತುವಾರಿ ಸಚಿವರಿದ್ದಾರೆ. ತಾವು ಅವರ ಹೊಣೆ ನಿರ್ವಹಣೆ ಬಗ್ಗೆ ಮಾತ್ರ ಗಮನಹರಿಸುತ್ತಿದ್ದು, ಒಳ್ಳೆಯ ಕೆಲಸ ಮಾಡಿ ಒಳ್ಳೆಯ ಹೆಸರು ಪಡೆಯುವಂತೆ ಪ್ರೇರೇಪಿಸುತ್ತಿದ್ದೇನೆ’ ಎಂದು ಹೇಳಿದರು.


ಎಸಿಬಿ ರಚನೆಯಿಂದ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಾಯುಕ್ತದಲ್ಲೂ ಪೊಲೀಸ್ ವ್ಯವಸ್ಥೆಯಿದೆ. ಜೊತೆಗೆ ಎಸಿಬಿ ಕೂಡ ಲೋಕಾಯುಕ್ತ ವ್ಯವಸ್ಥೆಯಡಿ ಬರುತ್ತದೆ. ಹೀಗಾಗಿ ದೂರು ಬಂದಾಗ ಅದನ್ನು ಖಚಿತಪಡಿಸಿಕೊಂಡು ಲೋಕಾಯಕ್ತ ಅಥವಾ ಎಸಿಬಿ ಪೊಲೀಸರಿಗೆ ಸೂಚನೆ ನೀಡಬಹುದಾಗಿದೆ ಎಂದರು.

ಈ ವೇಳೆ ಲೋಕಾಯುಕ್ತ ಎಡಿಜಿಪಿ ಡಾ ಪರಶಿವಮೂರ್ತಿ, ಡಿಸಿ ಸತ್ಯವತಿ, ಎಸ್ಪಿಅಣ್ಣಾಮಲೈ, ಜಿಪಂ ಸಿಇಒ ರಾಗಪ್ರಿಯಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News