ಖಾಸಗಿ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ವಿವಿ: ಸಚಿವ ರಾಯರೆಡ್ಡಿ

Update: 2017-05-21 15:54 GMT

ಬೆಂಗಳೂರು, ಮೇ 21: ನಿರುದ್ಯೋಗ ನಿವಾರಣೆ ದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲೆ ಕರ್ನಾಟಕ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿಗಾಗಿ ನೂತನ ಕೌಶಲ್ಯ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಘೋಷಿಸಿದ್ದಾರೆ.

ರವಿವಾರ ರಾಮಯ್ಯ ಸಮೂಹ ಸಂಸ್ಥೆಗಳ ನೂತನ ಲಾಂಛನ, ಸಂಸ್ಥೆಯ ಸಂಸ್ಥಾಪಕ ರಾಮಯ್ಯನವರ ಪುತ್ಥಳಿ ಅನಾವರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯಾಭಿವೃದ್ಧಿ ಬಹಳ ಮುಖ್ಯ. ಹೀಗಾಗಿ ಕೌಶಲ್ಯಾಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಪ್ರತ್ಯೇಕ ವಿವಿ ಆರಂಭಿಸಲಾಗುವುದು ಎಂದರು.

ಕೌಶಲ್ಯಾಭಿವೃದ್ಧಿಗೆ ನೂತನ ಕೌಶಲ್ಯ ವಿವಿ ಕಾರ್ಯಾರಂಭ ಸಂಬಂಧ ಈಗಾಗಲೇ ಟಾಟಾ ಸಂಸ್ಥೆಯೊಂದಿಗೆ ಎರಡು-ಮೂರು ಸುತ್ತಿನ ಸಮಾಲೋಚನೆ ನಡೆಸಲಾಗಿದೆ ಎಂದ ಅವರು, ಎಲ್ಲವೂ ಅಂತಿಮಗೊಂಡರೆ ಪ್ರಸಕ್ತ ಸಾಲಿನಿಂದಲೇ ನೂತನ ವಿಶ್ವ ವಿದ್ಯಾಲಯ ಕಾರ್ಯಾರಂಭ ಮಾಡಲಾಗಿದೆ ಎಂದರು.

 ರಾಜ್ಯದಲ್ಲಿ 217 ಎಂಜಿನಿಯರಿಂಗ್ ಕಾಲೇಜುಗಳಿದ್ದು, 4 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಆ ಪೈಕಿ ವಾರ್ಷಿಕ 80ಸಾವಿರ ಎಂಜಿನಿಯರಿಂಗ್ ಪದವೀಧರರು ಹೊರ ಬರುತ್ತಿದ್ದಾರೆ. ಆದರೆ, ಶೇ.4ರಿಂದ 5ರಷ್ಟು ಮಂದಿಗಷ್ಟೇ ಉದ್ಯೋಗ ಸಿಗುತ್ತಿದೆ. ಉಳಿದವರು ನಿರುದ್ಯೋಗಿಗಳಾಗುತ್ತಿದ್ದಾರೆಂದು ಹೇಳಿದರು.

ಎಲ್ಲರಿಗೂ ಉದ್ಯೋಗ ಒದಗಿಸಲು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಿದೆ. ಮಾತ್ರವಲ್ಲ ಎಲ್ಲ ವರ್ಗದವರಿಗೂ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕೆಂದ ಅವರು, ಕೇಂದ್ರ ಸರಕಾರ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿದರು.

ಬಡವರಿಗೆ ಆದ್ಯತೆ ನೀಡಿ: ಬಡ-ಮಧ್ಯಮ ವರ್ಗದವರಿಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಮಯ್ಯ ಸಂಸ್ಥೆ ಸೇವೆ ಅನನ್ಯ. ಈ ಸಂಸ್ಥೆ ಬಡವರಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಕಲ್ಪಿಸಲು ಮತ್ತಷ್ಟು ಆಸ್ಥೆ ವಹಿಸಬೇಕೆಂದು ರಾಯರೆಡ್ಡಿ ಮನವಿ ಮಾಡಿದರು.

 ಖಾಸಗಿ ಸಂಸ್ಥೆಯವರು ಬಂಡವಾಳ ಹೂಡಿ ಶಿಕ್ಷಣ ಸಂಸ್ಥೆ ಆರಂಭಿಸಿರುತ್ತಾರೆ. ಅವರ ಕಷ್ಟಗಳ ಬಗ್ಗೆ ನಮಗೂ ಗೊತ್ತಿದೆ. ಆದರೂ, ಬಡವರು ಮತ್ತು ಆಶಕ್ತರಿಗೆ ನೆರವು ನೀಡಬೇಕು. ಆ ನಿಟ್ಟಿನಲ್ಲಿ ಎಂ.ಎಸ್.ರಾಮಯ್ಯ ಸಮೂಹ ಸಂಸ್ಥೆಗಳು ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಾಸ್ತ ಚಾಚಬೇಕೆಂದು ಕೋರಿದರು.

ಉನ್ನತ ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಿದ್ದು, ಒಟ್ಟಾರೆ 24 ಸಾವಿರ ಕೋಟಿ ರೂ.ಅನುದಾನ ಮೀಸಲಿಟ್ಟಿದೆ. ಅಲ್ಲದೆ, ಅಂಬೇಡ್ಕರ್ ಸ್ಕೂಲ್ ಆಫ್ ಎಕಾಮಿಕ್ಸ್ ಆರಂಭಿಸುತ್ತಿದೆ. ಅದೇ ರೀತಿಯಲ್ಲಿ ಕೇಂದ್ರ ಸರಕಾರ ಶಿಕ್ಷಣ ಕೇಂದ್ರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದರು.

‘ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಪದವಿ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಉಚಿತವಾಗಿ ಲ್ಯಾಪ್‌ಟಾಪ್ ನೀಡಲಾಗುವುದು. ಅಲ್ಲದೆ, ಉಚಿತ ವೈ-ಫೈ ಹಾಗೂ ಗ್ರಂಥಾಲಯ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುತ್ತಿದೆ’

-ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News