ನಗರದ ಸ್ವಚ್ಛತೆಗೆ ಮತ್ತಷ್ಟು ಯಂತ್ರಗಳ ಖರೀದಿ: ಜಾರ್ಜ್

Update: 2017-05-22 14:25 GMT

ಬೆಂಗಳೂರು, ಮೇ 22: ನಗರದ ಸ್ವಚ್ಛತೆಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ 50 ಕೋಟಿ ರೂ.ಅನುದಾನದಡಿ ಖರೀದಿಸಿರುವ ಯಾಂತ್ರಿಕ ಕಸ ಗುಡಿಸುವ ಎಂಟು ಯಂತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಚಾಲನೆ ನೀಡಿದರು.

ಸೋಮವಾರ ಇಲ್ಲಿನ ವಿಧಾನಸೌಧದ ಆವರಣದಲ್ಲಿನ ವೈಭವೊಪೇತ ಮೆಟ್ಟಿಲುಗಳ ಬಳಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಸಿಎಂ ಸಿದ್ಧರಾಮಯ್ಯ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಉಪ ಮೇಯರ್ ಆನಂದ್, ಮೇಲ್ಮನೆ ಸದಸ್ಯ ಕೆ.ಗೋವಿಂದರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ನೂತನ ಯಂತ್ರಗಳಿಗೆ ಹಸಿರು ನಿಶಾನೆ ತೋರಿಸಿದರು.

ಈ ವೇಳೆ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ದೊಡ್ಡ ಗಾತ್ರದ ಯಾಂತ್ರಿಕ ಕಸ ಗುಡಿಸುವ 8 ಯಂತ್ರಗಳು ಮತ್ತು ಸಣ್ಣ ಗಾತ್ರದ ಒಂದು ಯಂತ್ರ ಸೇರಿದಂತೆ ಒಟ್ಟು 9ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲಾಗಿದೆ ಎಂದರು.

ಒಂದೊಂದು ಯಂತ್ರವೂ ನೂರು ಮಂದಿ ಪೌರಕಾರ್ಮಿಕರು ಮಾಡುವಂತಹ ಕೆಲಸವನ್ನು ಮಾಡುತ್ತದೆ. ನಗರದ ಹೊರ ವರ್ತುಲ ರಸ್ತೆ, ಮೇಲ್ಸೇತುವೆಗಳ ಮೇಲೆ ಈ ಯಂತ್ರಗಳ ಮೂಲಕ ಕಸ ಗುಡಿಸಲಾಗುವುದು. ಒಂದು ಯಂತ್ರ ಪ್ರತಿದಿನ 50 ಕಿ.ಮೀ ಉದ್ದದ ರಸ್ತೆಯನ್ನು ಶುಚಿಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.

ಈ ಯಂತ್ರಗಳ ಮೂಲಕ ಕಸ ಗುಡಿಸುವ ಕಾರ್ಯಾಚರಣೆಯನ್ನು ಗಮನಿಸಿ ಯಶಸ್ವಿಯಾದರೆ ಮತ್ತಷ್ಟು ಯಂತ್ರಗಳನ್ನು ಖರೀದಿ ಮಾಡಲಾಗುವುದು ಎಂದ ಅವರು, ಆರೋಗ್ಯಕರ ಮತ್ತು ಸ್ವಚ್ಛ ನಗರ ನಿರ್ಮಾಣಕ್ಕಾಗಿ ನಗರೋತ್ಥಾನ ಯೋಜನೆಯಡಿ ಈ ಯಂತ್ರಗಳನ್ನು ಖರೀದಿಸಲಾಗಿದೆ ಎಂದು ವಿವರಣೆ ನೀಡಿದರು.

ಪರಿಶೀಲಿಸಿ ಕ್ರಮ: ಈಗಾಗಲೇ ನಾಮಕರಣವಾದ ರಸ್ತೆಗೆ ಕರ್ನಲ್ ನಿರಂಜನ್ ಹೆಸರಿಡುವ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗಿದ್ದು, ಆ ರಸ್ತೆಗೆ ಸ್ವಾತಂತ್ರ ಹೋರಾಟಗಾರ ಬೆಟ್ಟಸಿದ್ಧಪ್ಪ ಎಂಬವರ ಹೆಸರನ್ನಿಡಲಾಗಿದೆ. ಈ ಸಂಬಂಧ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಹೆಸರಿರುವ ರಸ್ತೆಗೆ ಕರ್ನಲ್ ನಿರಂಜನ್ ಹೆಸರನ್ನಿಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಚಿವ ಕೃಷ್ಣಭೈರೇಗೌಡ, ಮೇಯರ್ ಪದ್ಮಾವತಿಗೆ ಪತ್ರ ಬರೆದಿದ್ದಾರೆ. ಈ ಕುರಿತಂತೆಯೂ ಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಇದ್ದು, ನಗರದ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ. ನಗರದ ಸ್ವಚ್ಛತೆಗೆ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಿದ್ದು, ಇದರಿಂದ ಸ್ವಚ್ಛತೆ ಕಾಪಾಡಲು ಅನುಕೂಲ. ಅಲ್ಲದೆ, ಯಂತ್ರಗಳಿಗೆ ಕ್ಯಾಮರಾ-ಜಿಪಿಎಸ್ ಅಳವಡಿಸಿದ್ದು, ಎಲ್ಲೆಲ್ಲಿ ಕಸ ಗುಡಿಸಿವೆ ಎಂದು ಗೊತ್ತಾಗಲಿದೆ.

-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News