ಶಿವಮೊಗ್ಗ: ಕಾರಾಗೃಹದಲ್ಲಿದ್ದ ಬಾಂಗ್ಲಾ ಯುವಕ ಪರಾರಿ

Update: 2017-05-22 17:33 GMT

ಶಿವಮೊಗ್ಗ, ಮೇ 22: ದೇಶಕ್ಕೆ ಅನಧಿಕೃತವಾಗಿ ಆಗಮಿಸಿದ್ದ ಆರೋಪದ ಮೇರೆಗೆ ಭದ್ರಾವತಿ ಪೊಲೀಸರಿಂದ ಬಂಧಿತನಾಗಿ ಶಿವಮೊಗ್ಗದ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಬಾಂಗ್ಲಾದೇಶದ ಯುವಕ ರವಿವಾರ ಸಂಜೆ ಜೈಲಿನಿಂದ ಪರಾರಿ ಯಾಗಿರುವ ಘಟನೆ ವರದಿಯಾಗಿದೆ. ಮುಹಮ್ಮದ್ ರೋಹನ್ ಹುಸೈನ್(25) ಪರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ಮುನಸಿನಗರ ಜಿಲ್ಲೆಯ ಬಾರಖಾಲಿ ಗ್ರಾಮದ ನಿವಾಸಿ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.\

ಕಾರಾಗೃಹ ಸಮೀಪದ ತೋಟದಲ್ಲಿ ಕೆಲಸಕ್ಕೆ ಕರೆದೊಯ್ಯುವ ವೇಳೆ ಆರೋಪಿಯು ಮುಖ್ಯ ಗೇಟ್‌ನಿಂದಲೇ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಾರಾಗೃಹ ಮೂಲಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.

ಈ ನಡುವೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಶೋಧ ಕಾರ್ಯ ಕೈಗೊಂಡಿದ್ದಾರೆ. ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಬೇಸರಗೊಂಡು ಮನೆ ತೊರೆದಿದ್ದ ಆರೋಪಿಯು ಬಾಂಗ್ಲಾದೇಶದ ಹಲವೆಡೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇತ್ತೀಚೆಗೆ ಸಮುದ್ರವೊಂದರ ಬಳಿ ನಿಂತಿದ್ದ ಹಡಗನ್ನೇರಿ ಚೆನ್ನೈಗೆ ಆಗಮಿಸಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಆತನನ್ನು ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ತದನಂತರ ರೈಲುಗಳ ಮೂಲಕ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿದ್ದ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬೆಂಗಳೂರಿನಿಂದ ಶಿವಮೊಗ್ಗದ ರೈಲನ್ನೇರಿದ್ದ. ಭದ್ರಾವತಿ ಪಟ್ಟಣದಲ್ಲಿ ಇಳಿದುಕೊಂಡು ರಾತ್ರಿ ಹಳೇನಗರದ ಬಳಿ ಸುತ್ತಾಡುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಬಾಂಗ್ಲಾದಿಂದ ಅನಧಿಕೃತವಾಗಿ ದೇಶಕ್ಕೆ ಆಗಮಿಸಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News