ವೈದ್ಯರ ಮೇಲೆ ಹಲ್ಲೆ: ಯಾರು ಹೊಣೆ?

Update: 2017-05-23 03:59 GMT

  ಸದ್ಯದ ದಿನಗಳಲ್ಲಿ ವೈದ್ಯರು ಬೇರೆ ಬೇರೆ ಕಾರಣಗಳನ್ನು ಮುಂದೊಡ್ಡಿ ಬೀದಿಗಿಳಿಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿ ಮುಖ್ಯವಾಗಿ ‘ನಮ್ಮ ಜೀವಕ್ಕೆ ಭದ್ರತೆ ಕೊಡಿ’ ಎಂಬ ಬೇಡಿಕೆಯೇ ಮುಂಚೂಣಿಯಲ್ಲಿದೆ. ಇನ್ನೊಬ್ಬರ ಜೀವಕ್ಕೆ ಭದ್ರತೆ ಕೊಡಬೇಕಾದ ವೈದ್ಯರೇ ತಮ್ಮ ಜೀವಕ್ಕೆ ಭದ್ರತೆ ಕೇಳುತ್ತಿರುವುದು ಸದ್ಯದ ವಿಪರ್ಯಾಸ. ಈ ದೇಶದಲ್ಲಿ ಶ್ರೀಸಾಮಾನ್ಯನ ಮೇಲೆ ಗುಂಪು ಹಲ್ಲೆಗಳು ಸಾಮಾನ್ಯವಾಗಿ ಬಿಟ್ಟಿವೆ. ಅವೆಲ್ಲಕ್ಕೂ ‘ಸಂಸ್ಕೃತಿ’ಯ ರಕ್ಷಣೆಯ ಮುದ್ರೆಗಳಿವೆ. ಆರು ಜನರನ್ನು ಸಾರ್ವಜನಿಕವಾಗಿ ಹಾಡಹಗಲೇ ದುಷ್ಕರ್ಮಿಗಳ ತಂಡ ಕಾರಣವಿಲ್ಲದೆ ಬರ್ಬರವಾಗಿ ಥಳಿಸಿ ಕೊಂದರೆ, ಅದು ದೇಶದ ಪಾಲಿಗೆ ಆತಂಕದ ಸಂಗತಿಯೇ ಅಲ್ಲ ಎನ್ನುವಷ್ಟು ನಮ್ಮ ಕಾನೂನು ವ್ಯವಸ್ಥೆ ಸಂವೇದನಾರಹಿತ ಸ್ಥಿತಿಯನ್ನು ತಲುಪಿದೆ. ಆದರೆ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಇದಕ್ಕಿಂತ ಭಿನ್ನವಾದುದು ಎಂದು ಭಾವಿಸಲಾಗಿದೆ ಮತ್ತು ವೈದ್ಯರು ಸಂಘಟಿತವಾಗಿ ಪ್ರತಿಭಟನೆಗಿಳಿದರೆ ಅದು ಸಾರ್ವಜನಿಕರ ಬದುಕಿನ ಮೇಲೆ ಮಾಡುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ವೈದ್ಯರ ಆತಂಕವನ್ನು ಗಂಭೀರವಾಗಿ ಪರಿಗಣಿಸಿದೆ. 

ಆದುದರಿಂದಲೇ ಕರ್ತವ್ಯದಲ್ಲಿರುವ ವೈದ್ಯರ ಮೇಲೆ ಹಲ್ಲೆಗಳೇನಾದರೂ ನಡೆದರೆ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಅವಕಾಶ ಕಾನೂನಿಗಿದೆ. ಈ ಕಾನೂನು ಸರಿಯಾಗಿ ಅನುಷ್ಠಾನವಾಗದೇ ಇರುವುದರಿಂದಲೇ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ ಎನ್ನುವುದು ವೈದ್ಯರ ವಾದ. ಆದರೆ ಈ ಹಲ್ಲೆಗಳ ಹಿಂದೆ ಯಾವುದೋ ಗೂಂಡಾಗಳು ಅಥವಾ ಸಮಾಜ ಬಾಹಿರ ಶಕ್ತಿಗಳಿರುವುದು ಕಡಿಮೆ. ಹತಾಶ ರೋಗಿಗಳ ಕುಟುಂಬಗಳೇ ಈ ಕಾನೂನಿಗೆ ಅಂತಿಮ ಬಲಿಪಶುಗಳು.

ಇತ್ತೀಚೆಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬನ ಸಾವಿಗೆ ವೈದ್ಯರೇ ಕಾರಣ ಎಂದು ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ ಹಲ್ಲೆ ಮತ್ತೆ, ರೋಗಿ-ವೈದ್ಯರ ನಡುವಿನ ಬಿಕ್ಕಟ್ಟನ್ನು ಬೀದಿಗಿಳಿಸಿದೆ. ಈ ಹಲ್ಲೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯರು ಒಂದಾಗಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಡ ಹೇರಲಾಗುತ್ತಿದೆ. ವೈದ್ಯಕೀಯ ಎನ್ನುವುದು ಒಂದು ಹುದ್ದೆ ಅಥವಾ ನೌಕರಿ ಅಲ್ಲ. ಅದನ್ನು ಸೇವೆ ಎಂದು ಕರೆಯಲಾಗುತ್ತದೆ ಮತ್ತು ಆಸ್ಪತ್ರೆಗಳು ತೆರೆದುಕೊಳ್ಳುವುದು ತಮ್ಮನ್ನು ತಾವು ಸೇವಾಸಂಸ್ಥೆಗಳು ಎಂದು ಕರೆದುಕೊಂಡೇ ಆಗಿದೆ. ಪ್ರತೀ ವೈದ್ಯನಿಗೂ ಅವನದೇ ಆದ ವೃತ್ತಿ ಧರ್ಮವಿದೆ. ಅದನ್ನು ಪಾಲಿಸಿದವನೇ ಅತ್ಯುತ್ತಮ ವೈದ್ಯನೆಂದು ಪರಿಗಣಿತನಾಗುತ್ತಾನೆ. ಅದನ್ನು ಪಾಲಿಸುವುದು ಆತನ ಕರ್ತವ್ಯವೂ ಆಗಿರುತ್ತದೆ. ವೈದ್ಯರು ದೇವರಲ್ಲ.

ಒಬ್ಬ ಮನುಷ್ಯನ ಸಾವು-ಬದುಕಿನಲ್ಲಿ ಆತ ನೇರವಾಗಿ ಪಾತ್ರವಹಿಸುವುದಕ್ಕಂತೂ ಸಾಧ್ಯವಿಲ್ಲ. ವೈದ್ಯರು ಆತನನ್ನು ಉಳಿಸುವ ಪ್ರಯತ್ನವನ್ನಷ್ಟೇ ಮಾಡುತ್ತಾರೆ. ತಾವು ಕಲಿತ ವಿದ್ಯೆಯ ಅನುಭವದ ಬಲದಿಂದ ಒಬ್ಬ ರೋಗಿಯ ಗುಣಲಕ್ಷಣಗಳನ್ನು ಅರಿತು ಔಷಧಿಗಳನ್ನು ನೀಡುತ್ತಾರೆ. ಯಾವ ವೈದ್ಯರೂ ಗೊತ್ತಿದ್ದೂ ಒಬ್ಬ ರೋಗಿಯನ್ನು ಸಾಯಿಸಲಾರ. ಇತ್ತ ರೋಗಿಯ ಕುಟುಂಬದ ಸ್ಥಿತಿ ತೀರಾ ಭಿನ್ನ. ಅವರು ಸಮಾಜದ ಬೇರೆ ಬೇರೆ ವರ್ಗಗಳಿಂದ ಬಂದವರಾಗಿರುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ರೋಗಪೀಡಿತನಾದ ಅಥವಾ ಗಾಯಾಳುವಾಗಿರುವ ತನ್ನ ಕುಟುಂಬ ಸದಸ್ಯನನ್ನು ಉಳಿಸುವುದಷ್ಟೇ ಮುಖ್ಯ. ವೈದ್ಯರು ಅವನನ್ನು ಉಳಿಸಿಯೇ ಉಳಿಸುತ್ತಾರೆ ಎನ್ನುವ ಅತೀ ನಂಬಿಕೆಯೊಂದಿಗೆ ಆಸ್ಪತ್ರೆಗೆ ದಾವಿಸುತ್ತಾರೆ. ವೈದ್ಯರ ಮಿತಿಗಳು ಅವರ ಅರಿವಿನಲ್ಲಿರುವುದಿಲ್ಲ.

ವೈದ್ಯರು ಒಂದು ದಿನದಲ್ಲಿ ನೂರಾರು ರೋಗಿಗಳನ್ನು ಭೇಟಿಯಾಗಬೇಕು, ಚಿಕಿತ್ಸೆ ನೀಡಬೇಕು. ಈ ಸಂದರ್ಭದಲ್ಲಿ ಅವರಿಗೂ ವೈಯಕ್ತಿಕವಾದ ಹತ್ತು ಹಲವು ಸಮಸ್ಯೆಗಳು, ಜಂಜಾಟಗಳು ಇರುತ್ತವೆ. ಅವೆಲ್ಲವನ್ನೂ ಮರೆತು ಎಲ್ಲ ರೋಗಿಗಳನ್ನು ಸಮಾನವಾಗಿ ಸಂತೈಸುವುದು ಅವರ ವೈದ್ಯ ವೃತ್ತಿಯ ಭಾಗವಾಗಿದೆ. ಆದರೆ ಸಾವು ಬದುಕಿನ ನಡುವೆ ಒದ್ದಾಡುವ ರೋಗಿಯ ಕುಟುಂಬಕ್ಕೆ ಮಾತ್ರ ತನ್ನ ಸದಸ್ಯನನ್ನು ಉಳಿಸಿಕೊಳ್ಳುವುದಷ್ಟೇ ಮುಖ್ಯವಾಗಿರುತ್ತದೆ. ಅವರ ಪಾಲಿಗೆ ಆ ಜೀವ ಅತ್ಯಮೂಲ್ಯ. ಇಲ್ಲಿ ಚಿಕಿತ್ಸೆ ವಿಫಲವಾದರೆ ಕಳೆದುಕೊಳ್ಳುವವರು ರೋಗಿಯೇ ಹೊರತು, ವೈದ್ಯರಲ್ಲ. ‘ರೋಗಿಯನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ’ ಎನ್ನುವ ನೋವು ಹೃದಯವಂತ ವೈದ್ಯರನ್ನು ಕಾಡಬಹುದು. ಆದರೆ ರೋಗಿಯನ್ನು ಕಳೆದುಕೊಂಡ ಕುಟುಂಬದ ಸ್ಥಿತಿ ಮಾತ್ರ ದಯನೀಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರ ಕಡೆಯಿಂದ ಸಣ್ಣದೊಂದು ನಿರ್ಲಕ್ಷ ಕಂಡು ಬಂದರೂ, ರೋಗಿಯ ಕುಟುಂಬ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತದೆ.

ಈ ನಿರ್ಲಕ್ಷವೇ ರೋಗಿಯ ಸಾವಿಗೆ ಕಾರಣವಾಗಿರಬಹುದು ಎನ್ನುವ ಅನುಮಾನ, ಸಿಟ್ಟು, ಹತಾಶೆ ಜೊತೆಯಾಗಿ ಅದು ವೈದ್ಯರ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ತಲುಪಬಹುದಾಗಿದೆ. ಆದರೆ ಇಂತಹ ಘಟನೆಗಳು ನಡೆಯುವುದು ತೀರಾ ಅಪರೂಪ ಎನ್ನುವುದನ್ನು ವೈದ್ಯರೂ ಗಮನಿಸಬೇಕಾಗಿದೆ. ವೈದ್ಯರಿಗೆ ಒತ್ತಡಗಳಿರುತ್ತವೆ, ನಿಜ. ಆದರೆ ಇದೇ ಸಂದರ್ಭದಲ್ಲಿ ಅದೆಷ್ಟೇ ಒತ್ತಡಗಳಿದ್ದರೂ ಅವರಿಗೆ ಕೆಲವು ಹೊಣೆಗಾರಿಕೆಗಳೂ ಇರುತ್ತವೆ. ಅದರಲ್ಲಿ ಮುಖ್ಯವಾಗಿ, ರೋಗಿಯ ಕುಟುಂಬದ ಜೊತೆಗೆ ಅಥವಾ ರೋಗಿಯ ಜೊತೆಗೆ ಅತ್ಯಂತ ಸಹನೆಯಿಂದ, ಸಹೃದಯದಿಂದ ವರ್ತಿಸುವುದು. ರೋಗಿಗಳನ್ನು ಬರೇ ಗ್ರಾಹಕ ಎಂಬ ನೆಲೆಯಲ್ಲಿ ನೋಡದೇ ಇರುವುದು. ಒಬ್ಬ ರೋಗಿ ವೈದ್ಯರಿಂದ ಮೊತ್ತ ಮೊದಲು ನಿರೀಕ್ಷಿಸುವುದು ಉತ್ತಮ ಔಷಧಿಯನ್ನಲ್ಲ, ಉತ್ತಮ ನಡವಳಿಕೆಯನ್ನು. ಅತ್ಯಾತುರದಿಂದ ಒಬ್ಬ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಬಂದಾಗ, ಕೆಲವು ವೈದ್ಯರು ಉಡಾಫೆಯಿಂದ ವರ್ತಿಸುವುದು ಆಗಾಗ ನಡೆಯುತ್ತದೆ. ಕೆಲವೊಮ್ಮೆ ದಾದಿಯರೂ ರೋಗಿಗಳ ಜೊತೆಗೆ ಸ್ಪಂದಿಸುವುದಿಲ್ಲ. ಸರಿಯಾದ ಸಮಯಕ್ಕೆ ವೈದ್ಯರು ಆಗಮಿಸುವುದಿಲ್ಲ.

ಇಂತಹ ಹೊತ್ತಿನಲ್ಲಿ ರೋಗಿ ಮೃತಪಟ್ಟರೆ ಕುಟುಂಬ ಆಕ್ರೋಶಕ್ಕೊಳಗಾಗುವುದು ಸಹಜವೇ ಆಗಿದೆ. ಆ ಆಕ್ರೋಶ ವೈದ್ಯರ ಮೇಲೆ ಅಥವಾ ಆಸ್ಪತ್ರೆಯ ಮೇಲೆ ಹಲ್ಲೆ ನಡೆಸುವುದರೊಂದಿಗೆ ಕೊನೆಗಾಣಬಹುದು. ಹಾಗೆಂದು ಅವರೇನೂ ರೌಡಿಗಳೋ, ದುಷ್ಕರ್ಮಿಗಳೋ ಆಗಿರುವುದಿಲ್ಲ ಎನ್ನುವುದನ್ನು ವೈದ್ಯರು, ವೈದ್ಯಕೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಅವರ ದುಃಖ, ಸಂಕಟಗಳು ಕೆಲವೊಮ್ಮೆ ಅಂತಹ ಕೃತ್ಯಗಳಿಗೆ ಇಳಿಸಬಹುದು. ಈ ಹಿನ್ನೆಲೆಯಲ್ಲಿ ‘ತಮ್ಮ ಮೇಲೆ ಹಲ್ಲೆಗಳು ನಡೆಯುತ್ತಿವೆ’ ಎಂದು ಪದೇ ಪದೇ ಬೀದಿಗಿಳಿಯುವ ವೈದ್ಯರೂ ಆತ್ಮವಿಮರ್ಶೆ ನಡೆಸುವ ಅಗತ್ಯ ಖಂಡಿತಾ ಇದೆ.

ನಿಜ. ಕೆಲವೊಮ್ಮೆ ಪ್ರಾಮಾಣಿಕ ವೈದ್ಯರ ಮೇಲೂ ಹಲ್ಲೆ ನಡೆಯಬಹುದು. ಆದರೆ ಇದೇ ಸಂದರ್ಭದಲ್ಲಿ ಈ ದೇಶದಲ್ಲಿರುವ ಎಲ್ಲ ವೈದ್ಯರು, ವೈದ್ಯಕೀಯ ಸಂಸ್ಥೆಗಳು ನೂರಕ್ಕೆ ನೂರು ಪ್ರಾಮಾಣಿಕರು ಎಂಬ ಭರವಸೆಯನ್ನು ಅವರು ನೀಡಬಲ್ಲರೇ? ಇಂದು ಆಸ್ಪತ್ರೆಗಳು ಯಾವುದೇ ಉದ್ಯಮಕ್ಕಿಂತ ಕಡಿಮೆಯಿಲ್ಲ. ಯಾವುದೋ ಸಣ್ಣ ರೋಗಕ್ಕೆಂದು ದಾಖಲಾದವರನ್ನು ಬಹುಬಗೆಯ ತಪಾಸಣೆ ನಡೆಸಿ ದುಡ್ಡು ಸುಳಿಯುವ ಉದಾಹರಣೆಗಳು ಅದೆಷ್ಟಿಲ್ಲ? ಸಂತಾನಹರಣದ ಹೆಸರಿನಲ್ಲಿ ಶಸ್ತ್ರಕ್ರಿಯೆ ನಡೆಸಿ ಅಮಾಯಕ ಬುಡಕಟ್ಟು ಮಹಿಳೆಯರನ್ನು ಕೊಂದು ಹಾಕಿದ ಪ್ರಕರಣಗಳು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಿವೆ. ಮೃತ ವ್ಯಕ್ತಿಯನ್ನು ಹಲವು ದಿನಗಳ ಕಾಲ ಐಸಿಯುನಲ್ಲಿಟ್ಟು ಲಕ್ಷಗಟ್ಟಲೆ ಹಣ ವಸೂಲಿ ಮಾಡುವ ವೈದ್ಯರು ನಗರಗಳ ಗಲ್ಲಿಗಲ್ಲಿಯಲ್ಲಿದ್ದಾರೆ.

ವೈದ್ಯರನ್ನೇ ದೇವರೆಂದು ನಂಬಿ ಬಂದವರನ್ನು ಅತ್ಯಂತ ಕ್ರೂರವಾಗಿ ಸುಲಿಯುವ ಆಸ್ಪತ್ರೆಗಳೆಷ್ಟಿಲ್ಲ? ಅವುಗಳ ಸಂಖ್ಯೆಗೆ ಹೋಲಿಸಿದರೆ ಇಂದು ಪ್ರತೀ ದಿನ, ಒಂದಲ್ಲ ಒಂದು ಆಸ್ಪತ್ರೆಯಲ್ಲಿ ದಾಳಿಗಳು ನಡೆಯುತ್ತಲೇ ಇರಬೇಕಿತ್ತು. ಅಂದರೆ ಜನರೂ ಬಹುತೇಕ ಸಂದರ್ಭದಲ್ಲಿ ವೈದ್ಯರನ್ನು ಕ್ಷಮಿಸುತ್ತಾರೆ. ಅದು ಅವರ ಮೇಲೆ ಇಟ್ಟಿರುವ ಗೌರವದ ಸಂಕೇತವಾಗಿದೆ. ಹಾಗೆಯೇ ಅಪರೂಪಕ್ಕೊಮ್ಮೊಮ್ಮೆ ಹಲ್ಲೆಗಳು ನಡೆಯುತ್ತಿದೆಯಾದರೂ ಅದು ಉದ್ದೇಶಪೂರ್ವಕವಲ್ಲ. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ ರೋಗಿಗಳ ಕುಟುಂಬದ ಮೇಲೆ ಗೂಂಡಾಕಾಯ್ದೆಯನ್ನು ದಾಖಲಿಸುವುದು, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವೈದ್ಯರು ಬೀದಿಗಿಳಿಯುವುದು ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ.

ಮೊತ್ತಮೊದಲು ಇಂತಹ ಹಲ್ಲೆಗಳು ಯಾಕೆ ನಡೆಯುತ್ತವೆ ಎಂಬಬಗ್ಗೆ ವೈದ್ಯರೊಳಗೇ ಆತ್ಮವಿಮರ್ಶೆ ನಡೆಯಬೇಕಾಗಿದೆ. ಹೊಸ ತಲೆಮಾರಿನ ವೈದ್ಯರಿಗೆ ವೈದ್ಯಕೀಯಧರ್ಮವನ್ನು, ಅದರ ವೌಲ್ಯವನ್ನು ಮನದಟ್ಟು ಮಾಡುವ ಕೆಲಸ ನಡೆಯಬೇಕು. ಹಾಗೆಯೇ ಹಲವು ಸಂಕಟಗಳ ಜೊತೆಗೆ ಬರುವ ರೋಗಿಗಳ ಜೊತೆಗೆ ಗರಿಷ್ಠ ತಾಳ್ಮೆ, ಸಹನೆಯಿಂದ ವೈದ್ಯರು ವರ್ತಿಸಬೇಕು. ಕೆಲವೊಮ್ಮೆ ಔಷಧಕ್ಕಿಂತ ಆ ವರ್ತನೆಯೇ ರೋಗಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಬಹುದು. ಆದುದರಿಂದ ವೈದ್ಯರ ಮೇಲೆ ನಡೆಯುವ ಹಲ್ಲೆ ನಿಲ್ಲಬೇಕಾದರೆ ವೈದ್ಯರು ಮತ್ತು ರೋಗಿಗಳ ನಡುವೆ ಒಂದು ಸಮನ್ವಯತೆ ಏರ್ಪಡಬೇಕಾಗಿದೆ. ಅದು ಕೋರ್ಟು ನ್ಯಾಯಾಲಯ, ಜೈಲುಗಳಿಂದ ಸರಿಪಡಿಸುವ ವಿಷಯ ಖಂಡಿತಾ ಅಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News