16 ವರ್ಷಕ್ಕೆ ಪ್ರತಿಷ್ಠಿತ ಏಮ್ಸ್ ನಲ್ಲಿ ಸೀಟು, 22 ವರ್ಷಕ್ಕೆ ಐಎಎಸ್ ಅಧಿಕಾರಿ !

Update: 2017-05-23 05:33 GMT

ಹೊಸದಿಲ್ಲಿ,ಮೇ 23 : ಜಬಲ್ಪುರದ ಮಾಜಿ ಕಲೆಕ್ಟರ್ ಡಾ. ರೋಮನ್ ಸೈನಿ ಅವರ ಜೀವನ ವೃತ್ತಾಂತ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸುವ ಹಲವಾರು ಮಂದಿಗೆ ಸ್ಫೂರ್ತಿದಾಯಕ. ಐಎಎಸ್ ತರಬೇತಿ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆಂದೇ ಅವರು ಉನಾ ಅಕಾಡೆಮಿ ಎಂಬ ಆನ್ಲೈನ್ ಸಂಸ್ಥೆಯನ್ನು ಸ್ಥಾಪಿಸಿ ಐಎಎಸ್ ಪರೀಕ್ಷಾ ಕೋಚಿಂಗ್ ಮಾತ್ರವಲ್ಲದೆ ಬೇರೆ ಕ್ಷೇತ್ರಗಳ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದ್ದಾರೆ.

ಸೈನಿ ಅವರ ಬಗ್ಗೆ ಇನ್ನೊಂದು ಮಹತ್ವದ ವಿಚಾರವೇನೆಂದರೆ ಅವರು 22 ವರ್ಷ ವಯಸ್ಸಿನವರಾಗಿರುವಾಗಲೇ ಐಎಎಸ್ ಅಧಿಕಾರಿಯಾದವರು. ಪ್ರಿ-ಮೆಡಿಕಲ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹಾಗೂ ದೇಶದ ಖ್ಯಾತ ಏಮ್ಸ್ ಸಂಸ್ಥೆಯಲ್ಲಿ ವೈದ್ಯರಾದ ಅತ್ಯಂತ ಕಿರಿಯ ವ್ಯಕ್ತಿಯೂ ಆಗಿದ್ದಾರೆ ಸೈನಿ. 2011ರಲ್ಲಿ ಅವರು ವೈದ್ಯಕೀಯ ಶಿಬಿರವೊಂದರ ಭಾಗವಾಗಿ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಜನರು ಅದೆಷ್ಟು ಕಷ್ಟ ಪಡುತ್ತಿದ್ದಾರೆಂಬುದರ ಅರಿವು ಅವರಿಗಾಗಿತ್ತು.

ತಮ್ಮ ಗೆಳೆಯ ಗೌರವ್ ಮುಂಜಾಲ್ ಸಹಾಯದಿಂದ ಉನಾ ಅಕಾಡೆಮಿ ನಡೆಸುತ್ತಿರುವ ಸೈನಿ ತಮ್ಮ ಸಂಸ್ಥೆ ಫೇಸ್ ಬುಕ್. ಖೋರಾ, ಇನ್ ಸ್ಟಾಗ್ರಾಂ, ಯುಟ್ಯೂಬಿನಲ್ಲೂ ಜನಪ್ರಿಯವಾಗುವಂತೆ ನೋಡಿಕೊಂಡಿದ್ದಾರೆ.

ತಮ್ಮ ಸಂಸ್ಥೆಯ ಜನಪ್ರಿಯತೆ ಹೆಚ್ಚಿದಾಗ ಅವರು ತಮ್ಮ ಐಐಟಿ ಹುದ್ದೆಯನ್ನು ತೊರೆದು ತಮ್ಮ ಸಂಪೂರ್ಣ ಸಮಯವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಿದರು.

ಅವರು ಭೂಗೋಳ ಶಾಸ್ತ್ರ, ಭೌತಶಾಸ್ತ್ರ, ಇತಿಹಾಸ, ರಾಜಕೀಯಶಾಸ್ತ್ರ, ಕಲೆ, ಪರಿಸರ, ಪರಿಸರ ವಿಜ್ಞಾನ, ಪರಿಸರ ವೈವಿಧ್ಯತೆ ಹೀಗೆ ವಿವಿಧ ವಿಷಯಗಳ ಮೇಲೂ ಕಲಿಸುತ್ತಾರೆ.

ಇಂದಿನ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಹಲವು ಪ್ರತಿಭಾನ್ವಿತರು ತಮಗಿಷ್ಟವಾದ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಅಸಾಧ್ಯವಾಗುತ್ತಿರುವುದು ನಿಜ. ಅಂಥವರಿಗೆ ಸೈನಿ ಅವರ ಸಂಸ್ಥೆ ಒಂದು ಆಶಾಕಿರಣವಾಗಿದೆ. ಕೇವಲ 25 ವರ್ಷದ ಈ ಯುವಕನ ಸಾಧನೆ ಅತ್ಯಪೂರ್ವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News