ಪಡಿತರ ವಿತರಣೆ ಕುರಿತಂತೆ ಸರ್ಕಾರದ್ದು ತುಘಲಕ್ ದರ್ಬಾರ್: ಸಿ.ಟಿ.ರವಿ
ಚಿಕ್ಕಮಗಳೂರು, ಮೇ.23: ಪಡಿತರ ವಿತರಣೆ ಕುರಿತಂತೆ ಸರ್ಕಾರ ದಿನಕ್ಕೊಂದು ಆದೇಶದ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದ್ದು, ಅದರಿಂದ ಒಂದೆಡೆ ಬಡವರನ್ನು ಮತ್ತೊಂದೆಡೆ ನ್ಯಾಯಬೆಲೆ ಅಂಗಡಿಯವರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಶಾಸಕ ಸಿ.ಟಿ.ರವಿ ದೂರಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪೂರ್ವ ತಯಾರಿ ಇಲ್ಲದೆ ಆಹಾರ ಇಲಾಖೆ ಬೇಕಾಬಿಟ್ಟಿ ಆದೇಶ ಹೊರಡಿಸುತ್ತಿದೆ. ಈ ಮೊದಲು ನ್ಯಾಯಯುತವಾಗಿ ಪಡಿತರ ವಿತರಣೆ ಮಾಡಬೇಕು. ತೂಕದಲ್ಲಿ ಮೋಸವಾಗಬಾರದು ಎನ್ನುವ ಕಾರಣಕ್ಕೆ ಕೋಟ್ಯಾಂತರ ಹಣ ವೆಚ್ಚಮಾಡಿ ತೂಕದ ಯಂತ್ರಗಳನ್ನು ವಿತರಿಸಿತ್ತು. ಈಗ ಆ ಸ್ಕೇಲ್‌ಗಳು ಉಪಯೋಗಕ್ಕಿಲ್ಲದಂತಾಗಿ ಗುಜರಿ ಅಂಗಡಿ ಸೇರಿದ್ದು ಸರ್ಕಾರದ ಕೆಟ್ಟ ನಿರ್ಧಾರದಿಂದ ಸಾರ್ವಜನಿಕ ಹಣ ಪೋಲಾಗಿತ್ತು. ಅದರ ನಂರ ಕೂಪನ್ ಮೂಲಕ ಪಡಿತರ ವಿತರಿಸಿ ದುರುಪಯೋಗ ತಡೆಯುತ್ತೇವೆ ಎಂದು ಕೂಪನ್‌ಗಳನ್ನು ವಿತರಿಸಲಾಗಿತ್ತು ಎಂದು ಹೇಳಿದರು.
ಈಗ ಅದನ್ನು ಬದಲಾವಣೆ ಮಾಡಿ ಕಂಪ್ಯೂಟರ್ ಹಾಗು ಬಯೋ ಮೆಟ್ರಿಕ್ ವ್ಯವಸ್ಥೆಯ ಮೂಲಕ ಆನ್ ಲೈನ್ ಪ್ಧತಿಯಲ್ಲಿ ಪಡಿತರ ವಿತರಣೆಗೆ ಆದೇಶಿಸಿದೆ. ಈ ಯೋಜನೆಗೆ ಅಗತ್ಯ ಕಂಪ್ಯೂಟರನ್ನು ನ್ಯಾಯಬೆಲೆ ಅಂಗಡಿ ಹೊಂದಿದವರೇ ಖರೀದಿಸಿ ಅಳವಡಿಸಿಕ್ಕೊಳ್ಳಬೇಕೆಂಬ ಸುತ್ತೋಲೆ ಹೊರಡಿಸಿದೆ. ಆದರೆ ಪಡಿರ ವಿತರಣೆ ಮಾಡಿ ಬಿಡಿಗಾಸಿನ ಕಮೀಷನ್ ಪಡೆಯುವ ನ್ಯಾಯಬೆಲೆ ಅಂಗಡಿಯವರು ಅದು ಸಾಧ್ಯವಿಲ್ಲ ಎಂದು ಅಸಹಕಾರ ತೋರುತ್ತಿದ್ದಾರೆ. ಹೀಗಾಗಿ ಬಡವರು ಬೀದಿಗಿಳಿಯುವ ಸ್ಥಿತಿ ಒದಗಿದೆ ಎಂದರು.
ಸಮರ್ಪಕ ಪಡಿತರ ವಿತರೆಗೆ ಆಹಾರ ಇಲಾಖೆ ಪಡಿತರ ವಿತರಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಿಜವಾದ ಸಮಸ್ಯೆ ತಿಳಿದುಕೊಂಡಿಲ್ಲ. ಅಂತಹ ವ್ಯವಸ್ಥೆ ಜಾರಿಯಾದರೆ ಕೆಲವು ಕಡೆ ಸರ್ವರ್ ಸಮಸ್ಯೆ ತಲೆ ದೋರಬಹುದು. ಜೊತೆಗೆ ಆನ್‌ಲೈನ್‌ನಲ್ಲಿ ಬೆರಳಚ್ಚು ಹೊಂದಾಣಿಕೆಯಾಗುವುದು ತಡವಾಗಬಹುದು. ಕುಗ್ರಾಮಗಳಲ್ಲಿ ನೆಟ್‌ವರ್ಕ್ ಸಂಪರ್ಕದ ಸಮಸ್ಯೆ ಇರುತ್ತದೆ. ಹೀಗಾಗಿ ಈಗಿನ ವ್ಯವಸ್ಥೆಯಲ್ಲಿ ಪಡಿತರ ಸುಗಮವಾಗಿ ವಿತರಣೆ ಕಷ್ಟ ಸಾಧ್ಯ ಎಂದು ಹೇಳಿದರು.
ಆನ್‌ಲೈನ್ ಮೂಲಕ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ನಿಟ್ಟಿನಲ್ಲಿ ಮಣಿಪಾಲ ಪ್ರಿಂಟಿಂಗ್ ಪ್ರೆಸ್ ಗೆ ಗುತ್ತಿಗೆ ನೀಡಲಾಗಿದ್ದು, ಅರ್ಹ ಬಡವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ 6 ತಿಂಗಳು ಕಳೆದರೂ ಅವರಿಗೆ ಪಡಿತರ ಚೀಟಿ ದೊರೆತಿಲ್ಲ. ಕಂದಾಯ ಮತ್ತು ಆಹಾರ ಇಲಾಖೆ ನಡುವೆ ಹೊಂದಾಣಿಕೆ ಕೊರತೆಯ ಕಾರಣದಿಂದ ಅರ್ಹರನ್ನು ಗುರುತಿಸಲಾಗದೆ ಬಿಪಿಎಲ್ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ. ಪಡಿತರ ವಿತರಣೆಯಲ್ಲಿನ ಲೋಪ ಕುರಿತಂತೆ ಉದ್ದೇಬೋರನ ಹಳ್ಳಿ ಗ್ರಾಮಸ್ಥರು ಧರಣಿ ನಡೆಸಿದ್ದು, ಸರ್ಕಾರ ತಕ್ಷಣ ಪರಿಹಾರ ಕಂಡುಕೊಳ್ಳದಿದ್ದರೆ ಧರಣಿ ತೀವ್ರತೆ ಪಡೆಯಲಿದೆ ಎಂದರು.
ಗೋಷ್ಠಿ ಯಲ್ಲಿ ನಗರಸಭಾ ಸದಸ್ಯರಾದ ದೇವರಾಜ್ ಶೆಟ್ಟಿ, ಟಿ.ರಾಜ ಶೇಖರ್ ಮತ್ತಿತರರುದ್ದರು.