ಮ್ಯಾಂಚೆಸ್ಟರ್ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಭಾರತೀಯ ವೈದ್ಯೆ

Update: 2017-05-24 03:30 GMT

ಮುಂಬೈ, ಮೇ 24: ಪಾರ್ಕಿಂಗ್ ಟ್ಯಾಬ್ ಹಾಗೂ ಪಾಪ್ ಸಂಗೀತ ಕಚೇರಿಯ ಹಾಡುಗಳ ಮೆನುವನ್ನು ಮೊದಲೇ ಬಿಡುಗಡೆ ಮಾಡಿದ್ದರಿಂದ ಭಾರತೀಯ ವೈದ್ಯೆ ಸೋನಲ್ ಪಾಠಕ್ (41), ಅವರ ಪುತ್ರಿ ಶ್ರೇಯಾ ಹಾಗೂ ಸ್ನೇಹಿತ ಅನ್ಯಾ ಕೂದಲೆಳೆ ಅಂತರದಿಂದ ಮ್ಯಾಂಚೆಸ್ಟರ್ ಉಗ್ರ ದಾಳಿಯಿಂದ ಪಾರಾಗಿದ್ದಾರೆ.

ಸೋಮವಾರ ರಾತ್ರಿ ನಡೆದ ಈ ಭೀಕರ ಘಟನೆಯ ಅನುಭವವನ್ನು ಜೈಪುರ ಮೂಲದ ಪಾಠಕ್ ಹಂಚಿಕೊಂಡಿದ್ದಾರೆ. ಅವರು ಸಂಗೀತ ಸಭಾಗೃಹದಿಂದ ತೆರಳಿದ ಕೇವಲ ಏಳು ನಿಮಿಷಗಳಲ್ಲೇ ಈ ಭೀಕರ ಸ್ಫೋಟ ಸಂಭವಿಸಿತ್ತು.

"ಸಂಗೀತ ಕಚೇರಿ ಕೊನೆಗೊಂಡಾಗ ಅನಗತ್ಯ ಜನ ಹಾಗೂ ವಾಹನದಟ್ಟಣೆಯಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಸಾಮಾನ್ಯವಾಗಿ ಕಾರನ್ನು ಏಳು ನಿಮಿಷ ನಡಿಗೆಯಷ್ಟು ಅಂತರದಲ್ಲಿ ನಿಲ್ಲಿಸುತ್ತೇನೆ. ಕೊನೆಯ ಮೂರು ಹಾಡುಗಳು ಬಾಕಿ ಇದ್ದಾಗ ನಾವು ಸಭಾಗೃಹದಿಂದ ಹೊರಗೆ ಬಂದೆವು" ಎಂದು ದಾಳಿ ನಡೆದ ಸ್ಥಳದಿಂದ ಎಂಟು ಮೈಲು ದೂರದ ಅಲ್ಟ್ರಿನ್‌ಛಾಮ್‌ನಲ್ಲಿ ವಾಸಿಸುವ ಪಾಠಕ್ ವಿವರಿಸಿದರು.

"ರಾತ್ರಿ 10:20ಕ್ಕೆ ನಾವು ನಡಿಗೆ ಆರಂಭಿಸಿದೆವು. ಸ್ಫೋಟ ನಡೆದ ಸ್ಥಳವನ್ನು 10.23ಕ್ಕೆ ದಾಟಿದೆವು. 10.30ಕ್ಕೆ ಸರಿಯಾಗಿ ಅಲ್ಲಿ ಸ್ಫೋಟ ಸಂಭವಿಸಿತು. ಮೂರು ಗಂಟೆಗಳ ವಾಹನ ಪಾರ್ಕಿಂಗ್ ಅವಧಿ ಮುಗಿಯುತ್ತದೆ ಎಂಬ ಕಾರಣಕ್ಕಾಗಿ ಪದೇ ಪದೇ ವಾಚ್ ನೋಡಿಕೊಳ್ಳುತ್ತಿದ್ದೆ. ಹೆಚ್ಚುವರಿಯಾಗಿ 3 ಪೌಂಡ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ನಿಗದಿತ ಸಮಯದೊಳಗೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಯೋಜನೆ ಹಾಕಿಕೊಂಡಿದ್ದೆ" ಎಂದರು.

ನೆಲಮಾಳಿಗೆಯಲ್ಲಿ ವಾಹನ ನಿಲ್ಲಿಸಿದ್ದರಿಂದ ಸ್ಫೋಟದ ಸದ್ದಾಗಲೀ, ಗದ್ದಲವಾಗಲೀ ಕೇಳಿಸಲಿಲ್ಲ ಎಂದು ಸ್ಪಷ್ಟಪಡಿಸಿದರು. ಹೊರಗೆ ಬರುತ್ತಿದ್ದಾಗ ಸಾಲು ಸಾಲು ಆಂಬುಲೆನ್ಸ್ ವಾಹನಗಳು ಧಾವಿಸುತ್ತಿದ್ದುದು ಅವರ ಗಮನಕ್ಕೆ ಬಂದಿಲ್ಲ. 11 ಗಂಟೆಗೆ ಮನೆಗೆ ತಲುಪಿದಾಗ ಈ ಭೀಕರ ಸುದ್ದಿ ತಿಳಿದುಬಂದಿತ್ತು ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News