ರಸ್ತೆ ಮಧ್ಯೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಮೃತ್ಯು
ಹಾಸನ, ಮೇ 24: ರಸ್ತೆ ಮಧ್ಯೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಸಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಗೋಪನಹಳ್ಳಿ ಗ್ರಾಮದ ವ್ಯವಸಾಯ ಮಾಡುತ್ತಿದ್ದ ರವಿ (40), ಗಾರ್ಮೇಂಟ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜೇಗೌಡ (27) ಹಾಗೂ ಕೆಎಂಎಫ್ ನಲ್ಲಿ ಮೂಟೆ ಹೊರುವ ಕೂಲಿ ಕಾರ್ಮಿಕ ಚನ್ನಪಟ್ಟಣದ ನಿವಾಸಿ ಕಿಟ್ಟು (35) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಇವರೆಲ್ಲಾ ಕುಟುಂಬದ ಸಂಬಂಧಿಗಳಾಗಿದ್ದರು. ರಾಜಘಟ್ಟದ ಮನೆಯೊಂದರಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ರವಿ ಅವರ ಮನೆಗೆ ದ್ವಿಚಕ್ರ ವಾಹನದಲ್ಲಿ ಮೂವರು ತೆರಳುತ್ತಿದ್ದಾಗ ರಸ್ತೆಯ ಮಧ್ಯೆ ವಿದ್ಯುತ್ ತಂತಿ ನೇತಾಡುತ್ತಿದ್ದು, ಮಳೆ ಬರುತ್ತಿದ್ದುದರಿಂದ ತಂತಿ ಕಾಣಿಸಿರಲಿಲ್ಲ. ಬೈಕ್ ಸಮೇತ ತಂತಿಗೆ ತಗಲಿದ್ದರಿಂದ ವಿದ್ಯುತ್ ಸ್ಪರ್ಶಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರಕಿದೆ.
ಇಂದು ಈ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ವೀಕ್ಷಿಸಿದಾಗ ಮೂವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಮೃತರ ಸಂಬಂಧಿಕರು ಹಾಗೂ ಊರಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಹಿಂದೆ ಗೋಪನಹಳ್ಳಿ ರಸ್ತೆಯ ಬಳಿ ಮೇಕೆಗೆ ಸೊಪ್ಪು ಕೊಯ್ಯಲು ಮರ ಹತ್ತಿದ ಓರ್ವರು ಅದರ ಬಳಿಯೇ ಇದ್ದ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ ಘಟನೆ ನಡೆದು ಕೆಲ ತಿಂಗಳು ಕಳೆದಿದ್ದು, ಮತ್ತೊಂದು ದುರ್ಘಟನೆ ನಡೆದಿರುವುದು ಅಲ್ಲಿನ ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದೆ.
ಇದೆ ವೇಳೆ ಮೃತರ ಸಂಬಂಧಿಕರು ಸುದ್ದಿಗಾರರೊಂದಿಗೆ ಮಾತನಾಡಿ, ಗೋಪನಹಳ್ಳಿಗೆ ತೆರಳುವ ರಸ್ತೆಯ ಬಳಿ ವಿದ್ಯುತ್ ತಂತಿ ಹಾದು ಹೋಗಿದ್ದು, ಈ ಭಾಗದಲ್ಲಿ ಹಲವು ವಿದ್ಯುತ್ ತಂತಿಗಳು ನೆಲಕ್ಕೆ ತಾಗುವಷ್ಟು ಕೆಳಗೆ ನೇತಾಡುತ್ತಿವೆ. ಕೆಇಬಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಅವರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ, ರಸ್ತೆ ಮಧ್ಯೆ ತಂತಿ ಇದ್ದಲ್ಲಿ ಅದು ಸ್ಪರ್ಶಿಸದ ರೀತಿಯಲ್ಲಿ ಅದಕ್ಕೆ ತಡೆಯಾಗಿ ರಕ್ಷಣೆಯ ತಂತಿ ಬೇಲಿ ಹಾಕಬೇಕು. ಅಂತಹ ಕೆಲಸ ಮಾಡದೆ, ನಿರ್ಲಕ್ಷ್ಯದಿಂದ ಇಂದು ಗ್ರಾಮದ ಮೂವರು ತಮ್ಮ ಪ್ರಾಣವನ್ನೆ ಬಲಿಕೊಡಬೇಕಾಯಿತು ಎಂದು ನೊಂದುಕೊಂಡಿದ್ದಾರೆ.