ಮೇ 25: ರೈತ ಸಂಘದಿಂದ ಸಿಎಂ ಮನೆ ಮುತ್ತಿಗೆ

Update: 2017-05-24 11:53 GMT

ತುಮಕೂರು, ಮೇ 25: ಸಮಸ್ತ ಗ್ರಾಮ ನಿವಾಸಿಗಳ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ, ರೈತರನ್ನು ನಿರ್ಲಕ್ಷಿಸಿರುವ ಸರ್ಕಾರದ ನೀತಿಯನ್ನು ಖಂಡಿಸಿ ಮೇ 25ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮುಖ್ಯಮಂತ್ರಿಯ ಮನೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಮಳೆಯಿಲ್ಲದೆ, ನೀರಿಲ್ಲದೆ ಬೆಳೆ ನಷ್ಟವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ತೆಂಗು, ಅಡಿಕೆ ಮರಗಳು ಒಣಗಿಹೋಗಿವೆ. ಕೊಳವೆ ಬಾವಿಗಳು ಬತ್ತಿಹೋಗಿವೆ. ಮತ್ತೊಂದೆಡೆ ಕೊಳವೆ ಬಾವಿ ಕೊರೆಯುವ ಲಾರಿ ಮಾಲಕರು ಮತ್ತು ಏಜೆನ್ಸಿಯವರು ಅವೈಜ್ಞಾನಿಕವಾಗಿ ಮನಸೋ ಇಚ್ಚೆ ಬೆಲೆ ನಿಗಧಿಪಡಿಸಿ ರೈತರನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕಂಡು ಕಾಣದಂತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಏನೂ ಪ್ರಯೋಜನವಿಲ್ಲದಂತಾಗಿದೆ. ಜನರ ರಕ್ಷಣೆ ಮಾಡಬೇಕಾದ ಜನಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಿಲ್ಲ. ಕೂಡಲೇ ಜಿಲ್ಲಾಡಳಿತ, ಲಾರಿ ಮಾಲೀಕರು, ಏಜೆನ್ಸಿಯವರನ್ನು ಮತ್ತು ರೈತ ಮುಖಂಡರನ್ನು ಕರೆದು ಕೊಳವೆ ಬಾವಿ ಕೊರೆಯಲು ಸರಿಯಾದ ಧರ ನಿಗಧಿಪಡಿಸದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

 ಮೇ 25ರಂದು ಬೆಳಗ್ಗೆ 10:30 ಕ್ಕೆ ಮುಖ್ಯಮಂತ್ರಿಯ ಮನೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News