ದಲಿತರು ದೇವಾಲಯ ಪ್ರವೇಶ: ಅರ್ಧಕ್ಕೆ ನಿಂತ ಕುಚ್ಚಿಂಗಿಯಮ್ಮ ಜಾತ್ರೆ
ತುಮಕೂರು.ಮೇ.24: ದಲಿತರ ದೇವಾಲಯದ ಒಳಗೆ ಪ್ರವೇಶ ಮಾಡಿ, ಪೂಜೆ ಸಲ್ಲಿಸಿದರು ಎಂಬ ಕಾರಣಕ್ಕೆ ನಾಲ್ಕು ದಿನ ನಡೆಯುಬೇಕಾಗಿದ್ದ ಲಕ್ಷ್ಮಿದೇವಿ (ಕುಚ್ಚಂಗೀಯಮ್ಮ) ಗ್ರಾಮ ದೇವತೆ ಜಾತ್ರೆಯನ್ನು ಎರಡೇ ದಿನಕ್ಕೆ ಮೊಟಕುಗೊಳಿಸಿರುವ ಘಟನೆ ತುಮಕೂರು ತಾಲೂಕು ಮಲ್ಲಸಚಿದ್ರ ಪಾಳ್ಯ ಸಮೀಪದ ಕೊತ್ತಿಹಳ್ಳಿಯಲ್ಲಿ ಇತ್ತೀಚಗೆ ನಡೆದಿದೆ.
ಗ್ರಾಮದ ಕುಚ್ಚಂಗಿಯಮ್ಮ ದೇವರ ಜಾತ್ರೆ ಪ್ರತಿವರ್ಷ ನಡೆಯುತ್ತಿದ್ದು, ದೇವಿಯನ್ನು ಜಲದೀ ಪೂಜೆಗೆ ದಲಿತರ ಕೇರಿಯ ಮೇಲೆ ತೆಗೆದುಕೊಂಡು ಹೋಗುವುದನ್ನು ಬಿಟ್ಟರೆ ಆರತಿಗಾಗಲಿ, ದೇವಾಲಯಕ್ಕೆ ಪ್ರವೇಶವಾಗಲಿ ದಲಿತರಿಗೆ ಅವಕಾಶ ಇರಲಿಲ್ಲ. ಇದು ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಾಗಿದ್ದು, ಸರಕಾರಿ ಜಾಗದಲ್ಲಿ ದೇವಾಲಯವನ್ನು ಕಟ್ಟಲಾಗಿದೆ.
ಕಳೆದ ಎರಡು ಮೂರು ವರ್ಷಗಳಿಂದ ಜಾತ್ರೆಗೆ ಊರಿನವರು ಸಭೆ ಸೇರಿದಾಗ ದಲಿತರಿಗೂ ದೇವಾಲಯಕ್ಕೆ ಪ್ರವೇಶ ನೀಡಬೇಕು ಹಾಗೂ ದಲಿತರು ಕುಚ್ಚಂಗಿಯಮ್ಮನಿಗೆ ಆರತಿ ಎತ್ತಲು ಅವಕಾಶ ನೀಡಬೇಕು ಎಂಬ ಬೇಡಿಕೆಯನು ಗ್ರಾಮದ ದಲಿತರು ಸಭೆಯ ಮಂದಿಡುತ್ತಲೇ ಬಂದಿದ್ದರು.
ದಲಿತರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯ ಕರ ಪತ್ರದಲ್ಲಿ ದಲಿತರನ್ನು ಬಿಟ್ಟು ಗ್ರಾಮದವರು ಜಾತ್ರೆ ಮಾಡಲು ಮುಂದಾದರು. ಇದನ್ನು ಪ್ರಶ್ನಿಸಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ, ತಹಶೀಲ್ದಾರ್ ಅವರಿಗೆ ದಲಿತರು ದೂರು ಸಲ್ಲಿಸಿದ್ದರು. ಮೇ.19-22ರವರೆಗೆ ಜಾತ್ರೆ ನಿಗಧಿಯಾಗಿದ್ದು, ದಲಿತರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ದೇವರಾಜು, ತಹಶೀಲ್ದಾರ್,ಪಿ.ಎಸ್.ಐ ಮತ್ತಿತರ ಅಧಿಕಾರಿಗಳು ದಲಿತರು ಮತ್ತಿ ಮತ್ತು ಇತರೆ ಜನಾಂಗದವರ ಸಭೆ ನಡೆಸಿ, ದಲಿತರನ್ನು ಬಿಟ್ಟು ಜಾತ್ರೆ ಮಾಡಲು ಕಾರಣ ಎನು ಎಂದು ಪ್ರಶ್ನಿಸಿದಾಗ, ನಾವು ಹಾಗೇ ಮಾಡುತ್ತಿಲ್ಲ. ಅವರು ನಮ್ಮೊಂದಿಗೆ ಸೇರಿ ಜಾತ್ರೆ ಮಾಡಲಿ, ಆರತಿ ಮಾಡಲಿ, ದೇವರಿಗೆ ಪೂಜೆ ಮಾಡಲಿ ನಮ್ಮ ಅಭ್ಯಂತರವಿಲ್ಲ ಎಂದು ಒಪ್ಪಿಕೊಂಡ ಪರಿಣಾಮ ತಾಲೂಕು ಆಡಳಿತ ಜಾತ್ರೆ ನಡೆಸಲು ಅನುಮತಿ ನೀಡಿದ್ದರು.
ಪೊಲೀಸರ ರಕ್ಷಣೆಯಲ್ಲಿ ಜಾತ್ರೆ ಆರಂಭವಾಗಿತ್ತು.
ಮೇ 19ರಂದು ಗ್ರಾಮದ ದೇವತೆ ಕುಚ್ಚಂಗಿಯಮ್ಮ(ಲಕ್ಷ್ಮಿದೇವಿ)ಯನ್ನು ಗ್ರಾಮದ ಕೆರೆಗೆ ದಲಿತರ ಕೇರಿಯ ಮೂಲಕವೇ ತೆಗೆದುಕೊಂಡು ಹೋಗಿ ಜಲಧೀ ಪೂಜೆ ನೆರವೇರಿಸಿ ದೇವಾಲಯಕ್ಕೆ ಕೆರೆ ತಂದಿದ್ದು, ತದನಂತರ ದೇವರಿಗೆ ಮೊದಲು ಆರತಿಯನ್ನು ಮೇಲ್ವರ್ಗದವರು ಮಾಡಿದ್ದು, ನಂತರ ದಲಿತರು ಆರತಿ ಕಾರ್ಯ ನೆರವೇರಿಸಿದ್ದಾರೆ.
ಮಾರನೇಯ ದಿನ ದೇವಾಲಯಕ್ಕೆ ಪ್ರಜೆ ಸಲ್ಲಿಸಲು ದಲಿತರು ಹೊರಟ ಸಂದರ್ಭದಲ್ಲಿ ಗಲಾಟೆಯಾಗಬಾರದು ಎಂಬ ಕಾರಣಕ್ಕೆ ರಕ್ಷಣೆ ನೀಡುವಂತೆ ಪೊಲೀಸರಿಗೆ ದಲಿತರು ಮನವಿ ಮಾಡಿದ್ದರು. ಮೊದಲಿಗೆ ದಲಿತರ ದೇವಾಲಯ ಪ್ರವೇಶಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅರ್ಚಕರು, ಪೊಲೀಸರ ಪ್ರವೇಶದಿಂದ ಪ್ರತಿಜ್ಞೆ ನೆರವೇರಿಸಿದ್ದರು.
ಆದರೆ ದಲಿತರು ದೇವಾಲಯ ಪ್ರವೇಶಿಸಿ ದೇವರಿಗೆ ಪ್ರಜೆ ಸಲ್ಲಿಸಿದ್ದನೇ ನೆಪ ಮಾಡಿಕೊಂಡ ಮೇಲ್ವರ್ಗದವರು ದೇವಾಲಯಕ್ಕೆ ಮಾಡಿದ್ದ ದೀಪಾಲಂಕಾರ, ಹೂವಿನ ಅಲಂಕಾರ, ಚಪ್ಪರ ಕಿತ್ತು ಹಾಕಿ ನಾಲ್ಕು ದಿನ ನಡೆಯಬೇಕಿದ್ದ ಜಾತ್ರೆಯನ್ನು ಎರಡನೇ ದಿನಕ್ಕೆ ಮೊಟಕುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಾತ್ರೆಯ ಮೂರನೇ ದಿನ ಕುಚ್ಚಂಗಿ ಅಮ್ಮನ ಹಾಗೂ ಅಂಜನೇಯ ಸ್ವಾಮಿ ಉತ್ಸವ ಗ್ರಾಮದಲ್ಲಿ ನಡೆಯಬೇಕು ಹಾಗೂ ನಾಲ್ಕನೇ ದಿನ ಅಂಜನೇಯ ಸ್ವಾಮಿಯನ್ನು ನೆಲೆಕಲ್ಲು ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ ಈ ಎರಡು ದಿನದ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಇದರಿಂದ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ.
ಜಾತ್ರೆ ನಿಂತು ಎರಡು ದಿನ ಕಳೆದರೂ ಸಮಾಜ ಕಲ್ಯಾಣ ಇಲಾಖೆಯವರಾಗಲಿ, ತಹಶೀಲ್ದಾರರಾಗಲಿ ಗ್ರಾಮಕ್ಕೆ ಭೇಟಿ ನೀಡಿ, ಜಾತ್ರೆ ನಿಲ್ಲಲ್ಲು ಕಾರಣ ಎನು ಎಂದು ತಿಳಿಸಿಲ್ಲ. ಹೀಗಾಗಿ ಗ್ರಾಮದಲ್ಲಿ ದಲಿತರ ತಿರುಗಾಟ ಕಡಿಮೆಯಾಗಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಅರ್ಧಕ್ಕೆ ನಿಂತಿರುವ ಜಾತ್ರೆಯನ್ನು ಮುಂದುವರೆಸಬೇಕು ಎಂಬುದು ಗ್ರಾಮದ ದಲಿತರ ಒತ್ತಾಯವಾಗಿದೆ.