ತಂದೆ-ಚಿಕ್ಕಮ್ಮ ಆತ್ಮಹತ್ಯೆಗೈದುದನ್ನು ಕಂಡು ನೇಣಿಗೆ ಕೊರಳೊಡ್ಡಿದ ಬಾಲಕ
ದಾವಣಗೆರೆ, ಮೇ 25: ಕೌಟುಂಬಿಕ ಕಲಹದಿಂದ ಮನನೊಂದು ನವ ವಿವಾಹಿತ ದಂಪತಿ ಸಾವಿಗೆ ಶರಣಾಗಿದ್ದು, ಅಪ್ಪನ ಸಾವಿನ ದೃಶ್ಯ ಕಂಡ ಮಗನೂ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಗುಡಾಳ್ ಗ್ರಾಮದ ರೈತ ನಟರಾಜ್ (40 ವರ್ಷ), ನವ ವಿವಾಹಿತೆ ಪಲ್ಲವಿ (24) ಹಾಗೂ ನಟರಾಜ್ ಅವರ ಪುತ್ರ ಪ್ರದೀಪ್ (15) ಆತ್ಮಹತ್ಯೆ ಮಾಡಿಕೊಂಡವರು.
ನಟರಾಜ್ ಪತ್ನಿ ವರ್ಷದ ಹಿಂದಷ್ಟೇ ಸಾವನ್ನಪ್ಪಿದ್ದರು. ಮೂವರು ಗಂಡು ಮಕ್ಕಳ ತಂದೆಯಾಗಿದ್ದ ನಟರಾಜ ತನ್ನ ಅಕ್ಕನ ಮಗಳು ಪಲ್ಲವಿಯನ್ನು ಮೂರು ದಿನಗಳ ಹಿಂದಷ್ಟೇ ದೇವಸ್ಥಾನವೊಂದರಲ್ಲಿ ತನ್ನ ಕುಟುಂಬದ ವಿರೋಧದ ಮಧ್ಯೆಯೂ ಮದುವೆಯಾಗಿದ್ದರು. ಈ ಬಗ್ಗೆ ಗ್ರಾಮದ ಹಿರಿಯರು, ಕುಟುಂಬದ ಹಿರಿಯರು ಮಾತುಕತೆ ನಡೆಸಿದ್ದರು.
ಪಲ್ಲವಿ ತನ್ನ ಸೋದರ ಮಾವನನ್ನು ಮದುವೆಯಾಗಿ ಊರಿಗೆ ಮರಳಿದ್ದರು. ಪಲ್ಲವಿ ಹಾಗೂ ಆಕೆಯ ಪಾಲಕರ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದ ಪಲ್ಲವಿ ಮತ್ತು ಪತಿ ನಟರಾಜ ತೋಟಕ್ಕೆ ತೆರಳಿ ಅಲ್ಲಿದ್ದ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಗ್ರಾಮಸ್ಥರಿಗೆ ವಿಷಯ ಗೊತ್ತಾಗಿ ಎಲ್ಲರೂ ಅಲ್ಲಿಗೆ ದೌಡಾಯಿಸಿದ್ದಾರೆ. ಇತ್ತ ತಂದೆ, ಚಿಕ್ಕಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಪ್ರದೀಪ್ ತೋಟದಿಂದ ಮನೆಗೆ ಓಡಿ ಹೋಗಿ, ಮನೆಯಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೂರೂ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು.