ಪ್ರೀತಿಗಾಗಿ, ಪ್ರಿಯಕರನಿಗಾಗಿ ಭಾರತಕ್ಕೆ :ರಾಜ್ಯ ರಾಜಧಾನಿಯಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ
ಬೆಂಗಳೂರು, ಮೇ 25: ಅಕ್ರಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದ ಮೂವರು ಪಾಕ್ತಿಸ್ತಾನದ ಪ್ರಜೆಗಳು ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ, ಅವರ ಬಳಿಯಿದ್ದ ನಕಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಕುಮಾರಸ್ವಾಮಿ ಲೇಔಟ್‌ನ ಯಾರಬ್‌ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನದ ಪ್ರಜೆಗಳಾದ ಸಮೀರಾ ಅಬ್ದುಲ್ ರೆಹಮಾನ್(25), ಕಿರಣ್ ಗುಲಾಂ ಅಲಿ(26), ಖಾಸೀಬ್ ಸಂಶುದ್ದೀನ್(30) ಹಾಗೂ ಕೇರಳ ಮೂಲದ ಮುಹಮ್ಮದ್ ಸಿಹಾಬ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್, ಮುಹಮ್ಮದ್ ಸಿಹಾಬ್ ಎಂಬಾತ ಕತಾರ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಾಕಿಸ್ತಾನದ ಪ್ರಜೆ ಸಮೀರಾ ಅಬ್ದುಲ್ ರೆಹಮಾನ್ ಎಂಬಾಕೆಯನ್ನು ಪ್ರೀತಿಸಿದ್ದಾನೆ. ಆದರೆ, ಇವರ ವಿವಾಹಕ್ಕೆ ಕುಟುಂಬಸ್ಥರು ಸಮ್ಮತಿ ನೀಡಲಿಲ್ಲ. ಇದರಿಂದ ಸಿಹಾಬ್ ತನ್ನ ಪ್ರೇಯಸಿ ಸಮೀರಾ, ನಾದಿನಿ ಕಿರಣ್, ಭಾಮೈದುನ ಸಂಶುದ್ದಿನ್‌ನೊಂದಿಗೆ ಕತಾರ್‌ನಿಂದ ಮಸ್ಕತ್‌ಗೆ ಬಂದು ಅಲ್ಲಿಂದ ಕಠ್ಮಂಡು-ಪಾಟ್ನಾ ಮೂಲಕ ಭಾರತಕ್ಕೆ ನುಸುಳಿ ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಲೇಔಟ್‌ಗೆ ಬಂದು ನೆಲೆಸಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಲೇಔಟ್‌ನ ಯಾರಬ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ವಾಸ ಮಾಡಿಕೊಂಡಿದ್ದ ಮೂವರು ಪಾಕ್ ಪ್ರಜೆಗಳು ವಿವಿಧ ನಕಲಿ ಹೆಸರುಗಳನ್ನು ನೀಡಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್‌ಕಾರ್ಡ್ ಸೇರಿ ಹಲವಾರು ದಾಖಲೆಗಳನ್ನು ಮಾಡಿಸಿಕೊಂಡಿದ್ದರು ಎನ್ನಲಾಗಿದೆ.
ಪಾಕಿಸ್ತಾನದ ಮೂವರು ಪ್ರಜೆಗಳು ಯಾವುದೇ ಪಾಸ್‌ಪೋರ್ಟ್ ಇಲ್ಲದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪಾಕ್ ಪ್ರಜೆಗಳು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ವಿಚಾರವನ್ನು ಕೇಂದ್ರ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಕೇಂದ್ರ ಗುಪ್ತಚರ ಅಧಿಕಾರಿಗಳು ಹಾಗೂ ಎನ್‌ಐಎ ತಂಡ ಬೆಂಗಳೂರಿಗೆ ಆಗಮಿಸಿ ಬಂಧಿತರನ್ನು ವಿಚಾರಣೆ ನಡೆಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ, ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹಾಜರಿದ್ದರು.
‘ಆರೋಪಿಗಳು ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿಲ್ಲ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆರೋಪಿಗಳ ಬಳಿ ವೀಸಾ, ಪಾಸ್‌ಪೋರ್ಟ್ ಇರಲಿಲ್ಲ.
-ಪ್ರವೀಣ್‌ಸೂದ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ
ಪ್ರೀತಿಗಾಗಿ ಭಾರತಕ್ಕೆ ಬಂದೆ
‘ಸಮೀರಾ ಮನೆಯಲ್ಲಿ ನಮ್ಮ ಪ್ರೀತಿಯ ಬಗ್ಗೆ ಗೊತ್ತಿದೆ. ಆದರೆ, ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಮೂವರನ್ನು ಕರೆದುಕೊಂಡು ಭಾರತಕ್ಕೆ ಬಂದು ಬಿಟ್ಟೆ. ಆದರೆ,ನಾವು ಯಾವುದೇ ಉಗ್ರ ಚಟುವಟಿಕೆಗಳಲಿಲ್ಲ. ಬೇಕಾದರೆ ಯಾವುದೇ ತನಿಖೆ ನಡೆಯಲಿ ಎಂದು ಸಿಹಾಬ್ ವಿಚಾರಣೆಯಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ.’