ದುಬೈ: ಅಂತಾರಾಷ್ಟ್ರೀಯ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳದ ಸಹೋದರಿಯರಿಗೆ ಪ್ರಶಸ್ತಿ
ಭಟ್ಕಳ, ಮೇ 25: ಇತ್ತೀಚೆಗೆ ದುಬೈಯಲ್ಲಿ ನಡೆದ 12ನೆ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳ ಮೂಲದ ಸಹೋದರಿಯರಾದ ಫಾತಿಮಾ ಮೊಹತೆಶಮ್ ಹಾಗೂ ಆಯಿಶಾ ಮೊಹತೆಶಮ್ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.
ಕೆಲ ವರ್ಷಗಳ ಹಿಂದೆ ಈ ಸಹೋದರಿಯರ ತಾಯಿ ಫಾಯಿಝಾ ಮೊಹತೆಶಮ್ ಕೂಡ ಕುರ್‌ಆನ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸುವ ಮೂಲಕ ಭಟ್ಕಳದ ಕೀರ್ತಿಯನ್ನು ಗಲ್ಫ್ ರಾಷ್ಟ್ರಗಳಲ್ಲಿ ಪಸರಿಸಿದ್ದರು.
ಮುಹಮ್ಮದ್ ಬಿನ್ ರಾಷಿದ್ ಸೆಂಟರ್ ಫಾರ್ ಕಲ್ಚರಲ್ ಆ್ಯಂಡ್ ಸೋಶಿಯಲ್ ಅಂಡರ್‌ಸ್ಟ್ಯಾಂಡಿಂಗ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಟ್ಕಳದ ಮೊಹತೆಶಮ್ ಸಹೋದರಿಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿವಿಧ ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದು, ಅಂತಿಮ ಫಲಿತಾಂಶದಲ್ಲಿ ಮೊಹತೆಶಮ್ ಸಹೋದರಿಯರು ಪ್ರಶಸ್ತಿ ಗಳಿಸಿದ್ದಾರೆ. ಶೇಖ್ ಸಈದ್ ಬಿನ್ ಹಷರ್ ಅಲ್ ಮಖ್ತೂಮ್ ಅವರು ಫಾತಿಮಾ ಮೊಹತೆಶಮ್ ಹಾಗೂ ಆಯಿಶಾ ಮೊಹತೆಶಮ್ ಅವರಿಗೆ "ದುಬೈ ಇಂಟರ್ ನ್ಯಾಶನಲ್ ಹೋಲಿ ಕುರ್‌ಆನ್ ಅವಾರ್ಡ್" ನೀಡಿ ಗೌರವಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಹೋದರಿಯರ ತಂದೆ ಜಾನ್ ಸಿದ್ದೀಕ್ ಮೊಹತೆಶಮ್, ಫಾತಿಮಾ 12ನೇ ವರ್ಷದಲ್ಲಿ ಹಾಗೂ ಕಿರಿಯ ಪುತ್ರಿ ಆಯಿಶಾ ತನ್ನ 11ನೆ ವಯಸ್ಸಿನಲ್ಲಿ ಕುರ್‌ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿದ್ದರು. ಇಬ್ಬರಿಗೂ ತಾಯಿಯ ಪ್ರೋತ್ಸಾಹ ಹಾಗೂ ತರಬೇತಿಯಿತ್ತು. ಫಾತಿಮಾ ಹಲವಾರು ಕುರ್‌ಆನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಳು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಫಾತಿಮಾ ಹಾಗೂ 5ನೇ ತರಗತಿಯಲ್ಲಿ ಓದುತ್ತಿರುವ ಆಯಿಶಾ ದುಬೈಯ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಾಗಿದ್ದಾರೆ. ಇವರ ಮಾತೃಭಾಷೆ ನವಾಯತಿ ಆಗಿದ್ದರೂ ಸಹ ಅರಬಿಕ್ ಭಾಷೆಯಲ್ಲಿ ಪ್ರಭುತ್ವವನ್ನು ಪಡೆದುಕೊಂಡಿದ್ದಾರೆ ಎಂದರು.
ಕುರ್‌ಆನ್ ದೈವೀಕ ಗ್ರಂಥವಾಗಿದೆ. ಇದು ಮನುಷ್ಯರ ಮಾರ್ಗದರ್ಶನಕ್ಕಾಗಿ ಅವತ್ತೀರ್ಣವಾಗಿದ್ದು, ಸೃಷ್ಟಿಕರ್ತನ ಅನುಗ್ರಹದಿಂದ ಇಂತಹ ಗೌರವ ಒಲಿದುಬಂದಿದೆ. ಇದಕ್ಕಾಗಿ ನನ್ನ ಪಾಲಕರು, ಶಿಕ್ಷಕರು ತ್ಯಾಗ ಬಹಳಷ್ಟಿದೆ ಎಂದು ಫಾತಿಮಾ ಹೇಳಿದ್ದಾರೆ.
ಇಬ್ಬರು ಸಹೋದರಿಯರ ಸಾಧನೆಗೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಸೇರಿದಂತೆ ದುಬೈಯ ಜಮಾಅತ್ ಪದಾಧಿಕಾರಿಗಳು, ಎಸ್.ಎಂ.ಸೈಯದ್ ಖಲೀಲುರ್ರಹ್ಮಾನ್, ಮುಹಮ್ಮದ್ ಅಶ್ಫಾಖ್ ಸಾದಾ, ಮುಹಮ್ಮದ್ ಯೂಸೂಫ್ ಬರ್ಮಾವರ್ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.