×
Ad

ರಂಜಾನ್ ತಿಂಗಳಲ್ಲಿ ಸೂಕ್ತ ಭದ್ರತೆಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ: ರೋಷನ್ ಬೇಗ್

Update: 2017-05-25 19:32 IST

 ಬೆಂಗಳೂರು, ಮಾ 25: ರಂಜಾನ್ ತಿಂಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ವಕ್ಫ್ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

 ಗುರುವಾರ ವಿಕಾಸಸೌಧದಲ್ಲಿ ರಂಜಾನ್ ತಿಂಗಳಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಭದ್ರತೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಂಜಾನ್ ತಿಂಗಳಲ್ಲಿ ಇಫ್ತಿಯಾರ್ ಪ್ರಯುಕ್ತ ಮಸೀದಿಗಳ ಮುಂದೆ ತಿಂಡಿ ತಿನಿಸುಗಳ ಅಂಗಡಿಗಳನ್ನು ತೆರೆದಿರುತ್ತಾರೆ. ಕೆಲವು ಕಡೆಗಳಲ್ಲಿ ಪೊಲೀಸರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವಂತಹ ಪ್ರಯತ್ನಗಳು ನಡೆಯುತ್ತವೆ. ಈ ಬಾರಿ ಅಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ: ರಂಜಾನ್ ಹಬ್ಬವನ್ನು ನೆಪ ಮಾಡಿಕೊಂಡು ಕೋಮು ಶಕ್ತಿಗಳು ದುಷ್ಕೃತ್ಯ ನಡೆಸಲು ಸಂಚು ರೂಪಿಸುತ್ತಾರೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಹುಬ್ಬಳ್ಳಿ, ಬಿಜಾಪುರ, ಮಂಗಳೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಗೊತ್ತುಪಡಿಸಿದ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸದಾ ಜಾಗೃತರಾಗಿರಬೇಕೆಂದು ಅವರು ಹೇಳಿದರು.

ರಂಜಾನ್ ತಿಂಗಳ 26ನೆ ದಿನದ ರಾತ್ರಿ ಕೆಲವು ಯುವಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬೈಕ್ ವೀಲಿಂಗ್ ಮಾಡುವುದು, ಅತಿ ವೇಗವಾಗಿ ವಾಹನ ಚಲಾಯಿಸುವುದು ಮಾಡುತ್ತಾರೆ. ಇಂತವರ ವಿರುದ್ಧ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಚಾರ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿರು.

ಸಭೆಯಲ್ಲಿ ನಗರದ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಮತ್ತಿತರ ಅಧಿಕಾರಿಗಳಿದ್ದರು.

ರಂಜಾನ್ ತಿಂಗಳಲ್ಲಿ ಮುಸ್ಲಿಮ್ ಸಮುದಾಯ ವಾಸಿಸುತ್ತಿರುವ ಪ್ರದೇಶಗಳಲ್ಲಿ ನೀರಿಗೆ ಸಮಸ್ಯೆಯಾಗದಂತೆ ಜಲಮಂಡಳಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅದೇ ರೀತಿಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ರೊಂದಿಗೆ ಮಾತುಕತೆ ನಡೆಸಲಾಗುವುದು.

-ರೋಷನ್ ಬೇಗ್, ಸಚಿವ, ನಗರಾಭಿವೃದ್ಧಿ ಹಾಗೂ ವಕ್ಫ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News