×
Ad

ಭೀಕರ ಗಾಳಿ-ಮಳೆಗೆ ಅಪಾರ ಆಸ್ತಿಪಾಸ್ತಿ ನಷ್ಟ : ವರದಿ ನೀಡಲು ಅಧಿಕಾರಿಗಳಿಗೆ ಸಚಿವರ ಸೂಚನೆ

Update: 2017-05-25 20:55 IST

ತುಮಕೂರು,ಮೇ.25:ಶಿರಾ ತಾಲೂಕಿನ ಸುಮಾರು 15 ಗ್ರಾಮಗಳಲ್ಲಿ ಬುಧವಾರ ರಾತ್ರಿ ಬೀಸಿದ ಭಾರಿ ಗಾಳಿ-ಮಳೆಯಿಂದ ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು,ಇನ್ನೆರಡು ದಿನಗಳೊಳಗಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕೆಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಿರಾ ತಾಲೂ ಕಿನ ಮಳೆ ಪೀಡಿತ ಪ್ರದೇಶಗಳಾದ ಕಾಳಪುರ, ಮಾವನಹಳ್ಳಿ, ದೇವರಹಟ್ಟಿ, ದೊಡ್ಡಚಿಕ್ಕಗೂಳ, ಬೈರಾಪುರ, ಮಾಯಸಂದ್ರ,ತಾಳಗುಂದ, ಶಿರಾದಡು, ಮುಚ್ಚವೀರನಹಳ್ಳಿ, ಚಿಕ್ಕತಿಮ್ಮನಹಳ್ಳಿ, ಚೆನ್ನೇನಹಳ್ಳಿ, ಹೊನ್ನೇನಹಳ್ಳಿ ಗ್ರಾಮಗಳಿಗಿಂದು ಭೇಟಿ ನೀಡಿ ಪರಿಶೀಲಿಸಿದ ಅವರು ಹಿಂದೆಂದೂ ಕಾಣದ ವಿಚಿತ್ರ ಮಳೆ-ಗಾಳಿಯಿಂದ ಗ್ರಾಮಗಳು ತತ್ತರಿಸಿದ್ದು, ಸುಮಾರು 4 ಸಾವಿರಕ್ಕೂ ಹೆಚ್ಚು ತೆಂಗು,10 ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಬುಡ ಸಮೇತ ಬಿದ್ದು ಹೋಗಿದ್ದು,ಮಾವು, ಹಲಸು, ಹುಣಸೆ ಮರ ಸೇರಿದಂತೆ ಮತ್ತಿತರ ಮರಗಳು ಬಿದ್ದು ಹೋಗಿವೆ ಅಲ್ಲದೆ 400ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ.

ಸುನಾಮಿ ರೀತಿಯಲ್ಲಿ ಬೀಸಿದ ಗಾಳಿಯಿಂದ ಮರ ಗಿಡಗಳಿಗೆ ಹಾನಿಯಾಗಿರುವುದಲ್ಲದೆ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು, ದವಸ ಧಾನ್ಯಗಳು ನೀರು ಪಾಲಾಗಿವೆ.ಇನ್ನೆರಡು ದಿನಗಳಲ್ಲಿ ಸಮೀಕ್ಷಾ ವರದಿಯನ್ನು ಪಡೆದು ಸರಕಾರಕ್ಕೆ ಸಲ್ಲಿಸುತ್ತೇನೆ ಎಂದರು.

ಅಧಿಕ ಫಸಲು ನೀಡುವ ಮರಗಳು ಹಾನಿಗೊಳಗಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.ನಿಯಮಾವಳಿ ಪ್ರಕಾರ ಸರಕಾರದಿಂದ ದೊರೆಯಬೇಕಾದ ಪರಿಹಾರವನ್ನು ಶೀಘ್ರ ಒದಗಿಸುವ ಕೆಲಸವನ್ನು ಮಾಡುತ್ತೇನೆ.ನಷ್ಟದ ಕುರಿತು ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದು,ಮನೆಗಳನ್ನು ಕಳೆದುಕೊಂಡವರಿಗೆ ಹೊಸ ಮನೆ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ ಸಚಿವರು,ಮಳೆಯಿಂದ ಹಾನಿಗೊಳಗಾದ ತೋಟಗಳಿಗೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಬೈಕ್‌ನಲ್ಲಿ ತೆರಳಿ ಅಡಿಕೆ ಮತ್ತು ತೆಂಗಿನ ಮರಗಳು ಬುಡಮೇಲಾಗಿರುವುದನ್ನು ವೀಕ್ಷಿಸಿದರು. ರೈತರಿಗೆ ಧೈರ್ಯ ತುಂಬಿ, ನಷ್ಠ ಪರಿಾರವನ್ನು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಶಾಂತಾರಾಮ,ಮಧುಗಿರಿ ಉಪವಿಭಾಗಾಧಿಕಾರಿ ಡಾ:ವೆಂಕಟೇಶಯ್ಯ,ಶಿರಾ ತಹಶೀಲ್ದಾರ್ ಹೊನ್ನಶ್ಯಾಮೇಗೌಡ, ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News