×
Ad

ಖಾಯಮಾತಿಗೆ ಒತ್ತಾಯಿಸಿ ಪೌರಕಾರ್ಮಿಕರಿಂದ ಧರಣಿ

Update: 2017-05-25 22:29 IST

ಮಡಿಕೇರಿ, ಮೇ 25: ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘ ನಗರದಲ್ಲಿ ಪೊರಕೆ ಧರಣಿ ನಡೆಸಿತು.


ಪ್ರತಿಭಟನಾಕಾರರು ಪೊರಕೆ ಪ್ರದರ್ಶನದೊಂದಿಗೆ ತಮಟೆ ಬಾರಿಸಿ, ರಾಜ್ಯ ಸರಕಾರದ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಸಂಚಾಲಕ ಪಿ.ಜೆ. ಮಹಾಂತೇಶ ಮಾದಿಗ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ನಗರಸಭಾ ಆವರಣದಿಂದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.


 ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ಜೆ. ಮಹಾಂತೇಶ ಮಾದಿಗ, ಸ್ವಾತಂತ್ರ್ಯಾನಂತರದ ಈ ಸುದೀರ್ಘ ಅವಧಿಯಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ಸರಕಾರಗಳು ಖಾಯಂಗೊಳಿಸದೆ ಅನ್ಯಾಯವೆಸಗಿವೆ. ಪ್ರತಿಭಟನೆಯ ನಂತರವೂ ರಾಜ್ಯ ಸರಕಾರ ಹುದ್ದೆಯನ್ನು ಖಾಯಂಗೊಳಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೂನ್ 8 ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರು ತಮ್ಮ ಕೆಲಸ, ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.


ಪೌರಕಾರ್ಮಿಕ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಈ ತಿಂಗಳು 12 ಸಾವಿರ ರೂ. ವೇತನವನ್ನು ನೀಡಲಾಗಿದೆ. ಆದರೆ ಕಳೆದ ತಿಂಗಳುಗಳಲ್ಲಿ ಕೇವಲ ನಾಲ್ಕೈದು ಸಾವಿರ ವೇತನವನ್ನಷ್ಟೆ ಪಾವತಿಸಲಾಗಿದೆ. ಈ ರೀತಿ ಆದಲ್ಲಿ ಪೌರಕಾರ್ಮಿಕರು ಬದುಕು ನಡೆಸುವುದು ಹೇಗೆ ? ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು ಹೇಗೆ ಎಂದು ಪ್ರಶ್ನಿಸಿದರು.

2016ನೆ ಸಾಲಿನ ಮೇ 4ರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸುವ ವಿಚಾರ ಚರ್ಚೆಯಾಗಿ 2017ರ ಮಾರ್ಚ್ ಒಳಗಾಗಿ ವಿಶೇಷ ನೇಮಕಾತಿ ನಿಯಮ ರೂಪಿಸುವ ಮೂಲಕ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಎಲ್ಲ ನಿರ್ಧಾರ ಮತ್ತು ಭರವಸೆಗಳು ಹುಸಿಯಾಗಿವೆ ಎಂದು ಪ್ರಮುಖರು ಆರೋಪಿಸಿದರು.


ವಿವಿಧ ಸಂದರ್ಭಗಳಲ್ಲಿ ನ್ಯಾಯಾಲಯ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಎನ್ನುವ ಆದೇಶಗಳನ್ನು ನೀಡಿದೆ. ಇಷ್ಟೆಲ್ಲ ಕಾನೂನಾತ್ಮಕ ಬೆಂಬಲಗಳು ಇದ್ದರೂ ಪೌರಕಾರ್ಮಿಕರು ಮತ್ತು ವಾಟರ್‌ಮನ್‌ಗಳನ್ನು ರಾಜ್ಯ ಸರಕಾರ ಖಾಯಂಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಬೆೇಸರ ವ್ಯಕ್ತಪಡಿಸಿದರು.


ಪ್ರತಿಭಟನೆಗೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಜೂ.8ರಿಂದ ರಾಜ್ಯಾದ್ಯಂತ ಗುತ್ತಿಗೆ ಪೌರಕಾರ್ಮಿಕರು, ವಾಟರ್‌ಮನ್‌ಗಳು ಸ್ವಚ್ಛತಾ ಕಾರ್ಯ, ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಿ ಸ್ಥಳೀಯ ಸಂಸ್ಥೆಗಳ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಧರಣಿಯಲ್ಲಿ ಸಂಘದ ರಾಜ್ಯ ಸಂಚಾಲಕ ಮನು, ಪದಾಧಿಕಾರಿಗಳಾದ ಮನೋಹರ್, ಪ್ರವೀಣ್, ಮಂಜುಳಾ, ಕಬೀರ್, ವೆಂಕಟಲಕ್ಷ್ಮೀ ಸೇರಿದಂತೆ ಹಲವು ಮಂದಿ ಪೌರಕಾರ್ಮಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News