ಪ್ರಜ್ಞಾವಂತರೇ ಪ್ರಜ್ಞೆ ಕಳೆದುಕೊಂಡರೆ?

Update: 2017-05-25 18:49 GMT

ಮಾಧ್ಯಮಗಳು ಬೃಹತ್ ಕಾರ್ಪೊರೇಟ್‌ಗಳ ಜೀತದಾಳುಗಳಾಗಿ ಕಾರ್ಯನಿರ್ವಹಿಸುತ್ತಿರುವಾಗ, ನಿರ್ದಿಷ್ಟ ರಾಜಕೀಯ ಹಿತಾಸಕ್ತಿಯನ್ನು ಹೊಂದಿದ ಜನರು ಮಾಧ್ಯಮಗಳನ್ನು ಬಹಿರಂಗವಾಗಿ ಅಪಹರಿಸುತ್ತಿರುವ ಈ ದಿನಗಳಲ್ಲಿ, ಶ್ರೀಸಾಮಾನ್ಯನ ಪಾಲಿಗೆ ಪರ್ಯಾಯ ಮಾಧ್ಯಮವಾಗಿ ಒದಗಿ ಬಂದಿರುವುದು ಸಾಮಾಜಿಕ ತಾಣಗಳು. ಸುಳ್ಳನ್ನೇ ಸತ್ಯಮಾಡಲು ಬಹುತೇಕ ಮಾಧ್ಯಮಗಳು ಹೆಣಗುತ್ತಿರುವಾಗ, ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆಪ್‌ನಂತಹ ಮಾಧ್ಯಮಗಳ ಮೂಲಕ ಜನರು ವಾಸ್ತವವನ್ನು ಹರಡುವುದು, ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿವೆ. ಒಂದು ರೀತಿಯಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸಾಮಾಜಿ ತಾಣಗಳು ನುಂಗಲಾರದ ತುತ್ತು.

ಇಂದು ಟಿವಿ, ಪ್ರಿಂಟ್ ಮೀಡಿಯಾಗಳ ಸೋಗಲಾಡಿತನವನ್ನು ಶ್ರೀಸಾಮಾನ್ಯರು ಈ ಸಾಮಾಜಿಕ ತಾಣಗಳ ಮೂಲಕ ದಿಟ್ಟವಾಗಿ ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಸಾಮಾಜಿಕ ತಾಣಗಳ ದುರುಪಯೋಗವೂ ಯಥೇಚ್ಛವಾಗಿ ನಡೆಯುತ್ತಾ ಬರುತ್ತಿವೆ. ಶ್ರೀಸಾಮಾನ್ಯ ವಾಸ್ತವವನ್ನು ಹರಡಲು ಒಂದೆಡೆ ಈ ಮಾಧ್ಯಮವನ್ನು ನೆಚ್ಚಿಕೊಂಡ ಹೊತ್ತಲ್ಲೇ, ದುಷ್ಟ ಶಕ್ತಿಗಳು ಇವುಗಳನ್ನು ತಮಗೆ ಪೂರಕವಾಗಿ ಬಳಸು ಹವಣಿಸುತ್ತಿವೆ. ಒಂದು ರೀತಿಯಲ್ಲಿ, ಸಾಮಾಜಿಕ ತಾಣಗಳ ಶಕ್ತಿಯನ್ನು ದುರ್ಬಲಗೊಳಿಸುವ ಹುನ್ನಾರವೂ ಇದರ ಹಿಂದಿದೆ. ಸಾಮಾಜಿಕ ತಾಣಗಳನ್ನು ದುರುಪಯೋಗಪಡಿಸಿ ಗಲಭೆಗಳನ್ನು ಸೃ,ಷ್ಟಿಸುವಲ್ಲೂ ಕೆಲವರು ಯಶಸ್ವಿಯಾಗಿದ್ದಾರೆ. ವದಂತಿಗಳನ್ನು, ಕೋಮುಪ್ರಚೋದಕ ಹೇಳಿಕೆಗಳನ್ನು ಹರಡುವುದು, ಸುಳ್ಳುಸುದ್ದಿಗಳನ್ನು ಹಬ್ಬಿಸುವುದು ಈ ಹಿತಾಸಕ್ತಿಗಳ ಗುರಿಯಾಗಿದೆ ಮತ್ತು ಈ ಹುನ್ನಾರಕ್ಕೆ ಸಮಾಜದ ಗಣ್ಯರೆನಿಸುವವರೇ ಬಲಿಪಶುಗಳಾಗುತ್ತಿದ್ದಾರೆ.

ಸಾಧಾರಣವಾಗಿ ವದಂತಿಗಳನ್ನು, ಕೋಮು ಪ್ರಚೋದಕ ವರದಿಗಳನ್ನು ಹರಡುವವರ ಗುರುತುಗಳು ನಕಲಿಯಾಗಿರುತ್ತವೆ. ಶಿವಾಜಿಯ ಫೋಟೊವನ್ನೋ, ವಿವೇಕಾನಂದರ ಫೋಟೊವನ್ನೋ ದುರ್ಬಳಕೆ ಮಾಡಿ ತಮ್ಮ ಉದ್ದೇಶವನ್ನು ಸಾಧಿಸಲು ಅವರು ಸಾಮಾಜಿಕ ತಾಣಗಳಲ್ಲಿ ಹೊಂಚು ಹಾಕುತ್ತಿರುತ್ತಾರೆ. ಇವರ ಯಾವುದೇ ಅಸಲಿ ಫೋಟೋಗಳಾಗಲಿ, ವಿಳಾಸಗಳಾಗಲಿ ಅಲ್ಲಿ ಇರುವುದಿಲ್ಲ ಮತ್ತು ಇವರನ್ನು ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಸಾಮಾಜಿಕ ತಾಣಗಳಲ್ಲಿ ಹರಡಿವೆ. ಸಂಘಪರಿವಾರದ ಬಹುತೇಕ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಪ್ರಚೋದಕ ಸುದ್ದಿಗಳನ್ನು ಹರಡುವುದಕ್ಕಾಗಿಯೇ ಹಣಕೊಟ್ಟು ಯುವಕರನ್ನು ಸಾಕುತ್ತಿವೆ.

ದುರಂತ ಅದಲ್ಲ. ರಾಜಕೀಯ ಮತ್ತು ಕೋಮು ಸಂಘಟನೆಗಳ ಕೆಲವು ಯುವಕರು ಗಡಿಗಳನ್ನು ಮೀರಿ ಸ್ಟೇಟಸ್‌ಗಳನ್ನು ಹಾಕುವುದು ಸಹಜ. ಬೇಜವಾಬ್ದಾರಿ, ಅಜ್ಞಾನ, ದುರುದ್ದೇಶ ಎಲ್ಲವೂ ಅದರ ಹಿಂದೆ ಕೆಲಸ ಮಾಡಿರುತ್ತದೆ. ಆದರೆ ಸದ್ಯಕ್ಕೆ ಸಾಮಾಜಿಕ ತಾಣಗಳ ಅತೀ ದೊಡ್ಡ ಆತಂಕ, ಸೆಲೆಬ್ರಿಟಿಗಳು ಎಂದು ಭಾವಿಸುವವರೇ ತಮ್ಮ ಗಡಿಗಳನ್ನು ಮೀರಿ ಬೇಜವಾಬ್ದಾರಿ ಹೇಳಿಕೆಗಳನ್ನು ಹಾಕುತ್ತಿರುವುದು. ಅಷ್ಟೇ ಅಲ್ಲ, ಸಾಮಾಜಿಕ ತಾಣಗಳಲ್ಲಿ ಹರಿಯುತ್ತಿರುವ ಸುದ್ದಿಗಳ ಮಿಥ್ಯ-ಸತ್ಯಗಳನ್ನು ಗುರುತಿಸಲು ವಿಫಲರಾಗಿ ಅದಕ್ಕೆ ಅವರು ಬಲಿಯಾಗುತ್ತಿರುವುದು. ಬಾಲಿವುಡ್‌ನ ಹತ್ತು ಹಲವು ಗಣ್ಯರು ಇಂದು ಈ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ.

ಪರೇಶ್ ರಾವಲ್ ಅವರು ಇತ್ತೀಚೆಗೆ ಖ್ಯಾತ ಚಿಂತಕಿ ಅರುಂಧತಿ ರಾಯ್ ಅವರ ಕುರಿತಂತೆ ಒಂದು ಅಗ್ಗದ ಹೇಳಿಕೆಯನ್ನು ಛಾಪಿಸಿದರು. ‘‘ಕಾಶ್ಮೀರದಲ್ಲಿ ಮಿಲಿಟರಿ ಜೀಪಿಗೆ ಅರುಂಧತಿ ರಾಯ್ ಅವರನ್ನು ಕಟ್ಟಬೇಕು’’ ಎಂದು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದರು. ಈ ಹೇಳಿಕೆಯನ್ನು ನೀಡುವುದಕ್ಕೆ ಒಂದು ಕಾರಣವಿತ್ತು. ಸಾಮಾಜಿಕ ತಾಣದ ಒಂದು ನಕಲಿ ಪೇಜ್‌ನಲ್ಲಿ ಅರುಂಧತಿ ರಾಯ್ ಅವರು ಹೇಳಿದ್ದಾರೆ ಎಂದು ಸುಳ್ಳು ಪ್ರಚೋದಕ ಹೇಳಿಕೆಯನ್ನು ಹರಡಿ ಬಿಡಲಾಗಿತ್ತು. ಜಿಹಾದಿಗಳ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೈನ್ಯ ಸೋಲುತ್ತಿದೆ ಎಂಬ ಅರ್ಥದಲ್ಲಿ ಭಾರತೀಯರನ್ನು ಪ್ರಚೋದಿಸುವ ಸುಳ್ಳು ಹೇಳಿಕೆಯನ್ನು ದುಷ್ಕರ್ಮಿಗಳು ಅರುಂಧತಿ ರಾಯ್ ಹೆಸರಲ್ಲಿ ಹರಡಿದ್ದರು.

ಪರೇಶ್ ರಾವಲ್ ಒಬ್ಬ ಖ್ಯಾತ ಕಲಾವಿದ. ಸಾಮಾಜಿಕ ತಾಣಗಳಲ್ಲಿ ಹರಡುವ ಸುದ್ದಿಗಳಿಗೆ ಪ್ರತಿಕ್ರಿಯಿಸುವ ಮುನ್ನ ಅದರ ಮೂಲ ಎಷ್ಟು ವಿಶ್ವಾಸಾರ್ಹತೆಯಿಂದ ಕೂಡಿದೆ ಎನ್ನುವುದನ್ನು ಗಮನಿಸಬೇಕಾಗಿತ್ತು. ಆದರೆ ಬಿಜೆಪಿಯ ಸಹವಾಸದಿಂದ ಅವರು ಕಲಾವಿದನ ಪ್ರಬುದ್ಧತೆಯನ್ನು ಕಳೆದುಕೊಂಡಂತೆ ವರ್ತಿಸಿದರು ಮತ್ತು ಆ ಸುಳ್ಳನ್ನೇ ನಂಬಿ, ಅರುಂಧತಿ ರಾಯ್ ವಿರುದ್ಧ ಅತ್ಯಾತುರದಿಂದ ಹೇಳಿಕೆಯನ್ನು ನೀಡಿದರು. ಬಳಿಕ ಅವರಿಗೆ ಸತ್ಯ ಗೊತ್ತಾಗಿ ತನ್ನ ಹೇಳಿಕೆಯನ್ನ್ನೂ ಅಳಿಸಿ ಹಾಕಿದರು. ಆದರೆ ಅಷ್ಟರಲ್ಲಿ ಪರೇಶ್ ರಾವಲ್ ಹೇಳಿಕೆ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆ ಆರಂಭಿಸಿ ಆಗಿತ್ತು. ಅದರ ಪರ ವಿರೋಧ ಹೇಳಿಕೆಗಳೂ ಹೊರ ಬಿದ್ದಿದ್ದವು.

ಪರೇಶ್ ರಾವಲ್‌ನಂತಹ ಗಣ್ಯರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಸ್ಥಿತಿ ಹೇಗಿರಬಹುದು? ಈ ಹಿಂದೊಮ್ಮೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದ ನಂದಿತಾ ಸಾವು ಕೂಡ ಸಾಮೂಹಿಕ ಅತ್ಯಾಚಾರ, ಕೊಲೆ ಎಂಬಿತ್ಯಾದಿ ರೂಪ ಪಡೆದದ್ದು ಸಾಮಾಜಿಕ ತಾಣದ ದುಷ್ಟರ ಕಾರಣದಿಂದ. ಸಾಮಾಜಿಕ ತಾಣದಲ್ಲಿ ನಂದಿತಾ ಕುರಿತಂತೆ ಸುಳ್ಳು ಸುದ್ದಿಗಳು ಪುಂಖಾನುಪುಂಖವಾಗಿ ಹರಿದಾಡುವಾಗ ಅದನ್ನು ನಂಬಿ, ರಾಜ್ಯದ ಹಲವು ಗಣ್ಯರು ತಮ್ಮ ಹೇಳಿಕೆಗಳನ್ನು, ಆಕ್ರೋಶಗಳನ್ನು ವ್ಯಕ್ತಪಡಿಸಿದ್ದರು. ಮುಸ್ಲಿಮ್ ಸಮುದಾಯದ ಮೇಲೆಯೇ ದಾಳಿ ನಡೆಸಿದ್ದರು. ಆದರೆ ಬಳಿಕ, ನಂದಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು. ಅಷ್ಟರಲ್ಲಿ ತೀರ್ಥಹಳ್ಳಿ ಹೊತ್ತಿ ಉರಿದಿತ್ತು.

ಇಂದು ಸಾಮಾಜಿಕ ತಾಣದಲ್ಲಿ ಅತ್ಯಂತ ಆತಂಕ ಪಡಬೇಕಾಗಿರುವುದು ಗಣ್ಯರು ಅದರ ಒಳ ರಾಜಕೀಯಗಳನ್ನು ಅರ್ಥ ಮಾಡಿಕೊಳ್ಳದೆ, ದುಷ್ಟರ ಜೊತೆಗೆ ಸ್ಪರ್ಧೆಗೆ ಇಳಿದಂತೆ ವರ್ತಿಸುತ್ತಿರುವುದು. ಬಾಲಿವುಡ್‌ನ ಕಲಾವಿದರು ಪ್ರಜ್ಞಾವಂತರು, ಮುತ್ಸದ್ದಿಗಳು ಎಂಬ ಅನಿಸಿಕೆಯಿತ್ತು. ಇದೀಗ ಅವುಗಳೆಲ್ಲ ಹುಸಿಯಾಗುತ್ತಿವೆ. ಅಭಿಜಿತ್ ಎನ್ನುವ ಸಂಗೀತ ನಿರ್ದೇಶಕರೊಬ್ಬರು ಅತ್ಯಂತ ಅಸಹ್ಯ ಹೇಳಿಕೆಗಳನ್ನು ತನ್ನ ಅಸಲಿ ಹೆಸರಿನ ಮೂಲಕವೇ ಕೆಲವು ತಿಂಗಳಿಂದ ನೀಡುತ್ತಾ ಬರುತ್ತಿದ್ದಾರೆ. ಅತ್ಯಂತ ಆಘಾತಕಾರಿಯಾದ ಸಂಗತಿಯೆಂದರೆ, ಜೆಎನ್‌ಯು ಸಂಘಟನೆಯ ಕಾಶ್ಮೀರಿ ವಿದ್ಯಾರ್ಥಿನಿಯೊಬ್ಬರ ವಿರುದ್ಧ ಅಶ್ಲೀಲವಾಗಿ ಬರೆದು ಟ್ವಿಟರ್‌ನಿಂದ ನಿಷೇಧಕ್ಕೊಳಪಟ್ಟರು. ಇದು ಇಡೀ ಬಾಲಿವುಡ್‌ಗೇ ಅವಮಾನಕಾರಿ ಸಂಗತಿ. ದುರಂತವೆಂದರೆ, ಅಭಿಜಿತ್‌ರನ್ನು ನಿಷೇಧಿಸಿದ್ದಕ್ಕಾಗಿ ಸೋನು ನಿಗಮ್ ಕೂಡ ಟ್ವಿಟರ್‌ನಿಂದ ಹಿಂದೆ ಸರಿಯುವ ಮಾತನಾಡಿದರು.

ಅಂದರೆ ಆ ಮೂಲಕ ಸೋನು ನಿಗಮ್ ಅವರು ಅಭಿಜಿತ್ ಅವರ ಮಾತನ್ನು ಸಮರ್ಥಿಸಿಕೊಂಡರು. ಇತ್ತೀಚೆಗಷ್ಟೇ ‘ಅಝಾನ್’ ಬಗ್ಗೆ ಸೋನು ನಿಗಮ್ ಹೇಳಿಕೆ ನೀಡಿದಾಗ ಅದೊಂದು ಆಕಸ್ಮಿಕ ಎಂದು ಭಾವಿಸಲಾಗಿತ್ತು. ಆದರೆ ಅಭಿಜಿತ್ ಪರ ವಕಾಲತು ವಹಿಸುವ ಮೂಲಕ ಸೋನು ನಿಗಮ್, ತನ್ನ ಹೇಳಿಕೆಗಳ ಹಿಂದೆ ದುರುದ್ದೇಶ ಇದೆಯೆನ್ನುವುದನ್ನು ಸಾಬೀತು ಪಡಿಸಿದ್ದಾರೆ. ಇವರಷ್ಟೇ ಅಲ್ಲ, ಕೆಲವು ಕ್ರಿಕೆಟ್ ತಾರೆಯರೂ ಸಾಮಾಜಿಕ ತಾಣಗಳ ಮೂಲಕ ರಾಜಕೀಯ ಹೇಳಿಕೆಗಳನ್ನು ನೀಡಿ ತಮ್ಮ ದೇಶಪ್ರೇಮವನ್ನು ಬಹಿರಂಗವಾಗಿ ರಾಜಕಾರಣಿಗಳಂತೆಯೇ ಘೋಷಿಸತೊಡಗಿದ್ದಾರೆ.

ಸಮಾಜವನ್ನು, ದೇಶವನ್ನು ಒಂದುಗೂಡಿಸಲು ಕಾರಣರಾಗಬೇಕಾಗಿರುವ ಕ್ರಿಕೆಟ್ ತಾರೆಯರು, ಕಲಾವಿದರು ಇಂದು ಸಾಮಾಜಿಕ ತಾಣದ ವೈರಸ್‌ಗಳಾಗಿ ಪರಿವರ್ತನೆಯಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಸಾಮಾಜಿಕ ತಾಣದಲ್ಲಿ ಕನಿಷ್ಠ ಸಮಾಜದ ಗಣ್ಯರಾದರೂ ತಮಗೆ ತಾವೇ ಲಕ್ಷ್ಮಣ ರೇಖೆಗಳನ್ನು ಹಾಕಿಕೊಳ್ಳದೇ ಇದ್ದರೆ, ಶೀಘ್ರದಲ್ಲೇ ಸಾಮಾಜಿಕ ತಾಣಗಳು ಹೊಲಸು ಗಟಾರಗಳಾಗಿ ದುರ್ನಾತ ಬೀರಲು ಆರಂಭಿಸಲಿವೆ. ಇದರ ಲಾಭ ಯಾರಿಗೆ ಎನ್ನುವುದನ್ನು ಇಲ್ಲಿ ಮತ್ತೆ ವಿವರಿಸಬೇಕಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News