ಯುವಜನರು ವ್ಯಾಟ್ಸಪ್, ಫೇಸ್‌ಬುಕ್ ನಿಂದ ದೂರ ಇರಬೇಕು: ರಾಕೇಶ್
ಚಿಕ್ಕಮಗಳೂರು, ಮೇ.26: ವ್ಯಾಟ್ಸಪ್, ಫೇಸ್‌ಬುಕ್‌ಗಳಿಂದ ದೂರ ಇರುವಂತೆ ವಿದ್ಯಾರ್ಥಿಗಳಿಗೆ ಕಡೂರು ಪಿ.ಎಸ್.ಐ. ರಾಕೇಶ್ ಸಲಹೆ ನೀಡಿದರು.
ಅವರು ಶುಕ್ರವಾರ ಕಡೂರಿನ ಬಿ.ಎಡ್ ಕಾಲೇಜಿನಲ್ಲಿ ಕೌಟುಂಬಿಕ ಸಲಹಾ ಕೇಂದ್ರದ ವತಿಯಿಂದ ನಡೆದ ವಿವಾಹ ಪೂರ್ವ ಕಾನೂನು ಶಿಬಿರ ಉದ್ಘಾಟಿಸಿ ಮಾತನಾಡಿದರು. ಫೇಸ್‌ಬುಕ್, ವ್ಯಾಟ್ಸಪ್‌ಗಳಿಂದ ಯುಜನತೆ ದಾರಿ ತಪ್ಪುತ್ತಿದ್ದು ಅವುಗಳಿಂದ ಆದಷ್ಟು ದೂರ ಇರುವಂತೆ ಸಲಹೆ ನೀಡಿದರು.
ಅನೇಕ ಕುಟುಂಬಗಳು ದಾರಿ ತಪ್ಪಲು ಫೇಸ್‌ಬುಕ್ ಕಾರಣವಾಗಿದೆ.ಇವುಗಳಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಫೇಸ್‌ಬುಕ್ ನಲ್ಲೆ ಪ್ರೀತಿ ಪ್ರೇಮ ಎಂದು ದಾರಿತಪ್ಪಿ ಮುಂದೆ ಪರಿತಪಿಸುವುದಕ್ಕಿಂತ ಅವುಗಳಿಂದ ದೂರವಾಗಿರಿ ಎಂದು ತಿಳಿಸಿದರು.
ಶ್ರೀ ರಂಗನಾಥಸ್ವಾಮಿ ವಿದ್ಯಾಲಯ ಸಂಸ್ಥೆ ಕಾರ್ಯದರ್ಶಿ ಬಿ.ಆರ್.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಲಿಸ್ ಠಾಣೆಗೆ ಹೋಗಲು ಅಂಜಿಕೆ, ಕೋರ್ಟಿಗೆ ಬರಲು ಮುಜುಗರ ಇರುವಂತ ಅನೇಕ ಕುಟುಂಬಗಳು ಕೌಟುಂಬಿಕ ಸಲಹಾ ಕೇಂದ್ರದ ಮೂಲಕ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿಸಿಕೊಂಡು ಬೇರೆ ಬೇರೆ ಆದ ಅನೇಕ ಕುಟುಂಬಗಳು ಸಲಹಾ ಕೇಂದ್ರದ ಮೂಲಕ ಒಂದಾಗಿ ಬಾಳುತ್ತಿದ್ದಾರೆ ಎಂದು ನುಡಿದರು.
ಕೌಟುಂಬಿಕ ಸಲಹಾ ಕೇಂದ್ರದ ಅಧ್ಯಕ್ಷೆ ಸಾವಿತ್ರಿ ಗಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಶಿವಣ್ಣ, ಸಲಹೆಗಾರರಾದ ರಾಘವೇಂದ್ರ, ಮೀನಾಕ್ಷಿ ಮತ್ತಿತರರಿದ್ದರು.