×
Ad

ಜೂ. 12 ರಂದು ಕರ್ನಾಟಕ ಬಂದ್‌ಗೆ ಕರೆ

Update: 2017-05-26 19:59 IST

ಬೆಂಗಳೂರು, ಮೇ 26: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ, ಮೇಕೆದಾಟು ಯೋಜನೆ ಜಾರಿ ಹಾಗೂ ಸರಕಾರಿ ಕಾರ್ಖಾನೆಗಳ ಖಾಸಗೀಕರಣ ಖಂಡಿಸಿ ಜೂ.12 ರಂದು ಕನ್ನಡ ಚಳವಳಿ ಒಕ್ಕೂಟ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಬಯಲು ಸೀಮೆ ಜಿಲ್ಲೆಗಳು ದಿನದಿಂದ ದಿನಕ್ಕೆ ಕುಡಿಯುವ ನೀರಿಗೂ ತೀವ್ರವಾದ ರೀತಿಯಲ್ಲಿ ಪರದಾಡುವಂತಾಗಿದ್ದು, ಸರಕಾರ ಇದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಅದೇ ರೀತಿಯಲ್ಲಿ ಬೆಂಗಳೂರು ನಗರದಲ್ಲಿಯೂ ಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು, ಜನ ಸಾಮಾನ್ಯರು ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಜನರು ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ಕೇಂದ್ರ ಸರಕಾರ ಈ ಕುರಿತು ಮಾತಾಡಿಲ್ಲ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಇದೆ. ಈ ವೇಳೆ ನಮ್ಮ ರಾಜ್ಯದ ಬಿಜೆಪಿ ಸಂಸದರು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ನೀರು ಕೊಡಿಸಬಹುದಿತ್ತು. ಆದರೆ, ನಮ್ಮ ನಾಯಕರು ರಾಜಕೀಯ ಮಾಡುತ್ತಿದ್ದು, ಅದಕ್ಕೆ ರಾಜ್ಯದ ಜನರನ್ನು ಬಲಿ ಕೊಡುತ್ತಿದ್ದಾರೆ ಎಂದು ದೂರಿದರು.

ಮೇಕೆದಾಟು ಯೋಜನೆ ಜಾರಿ ಮಾಡಿದರೆ ಬೆಂಗಳೂರು ನಗರದ ಜನರಿಗೆ ಕುಡಿಯಲು ನೀರು ಕಲ್ಪಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ರಾಜ್ಯ ಸರಕಾರ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಇತ್ತೀಚೆಗೆ ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಎಂಇಎಸ್ ಕಾರ್ಯಕರ್ತರು ನಡೆಸಿದ ಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸಿದರು. ಸರಕಾರ ಕೂಡಲೇ ಇವರನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ನಿಯಂತ್ರಣದಲ್ಲಿರುವ ಸರಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಖಾಸಗೀಕರಣ ಮಾಡುವ ಮೂಲಕ ಸರಕಾರಿ ವ್ಯವಸ್ಥೆ ಮಾರಾಟ ಮಾಡಲು ಮುಂದಾಗಿದ್ದಾರೆ. ಎಚ್‌ಎಂಟಿ, ಮೈಸೂರು ಲ್ಯಾಂಪ್ಸ್, ಐಐಟಿ ಸೇರಿದಂತೆ ಹಲವು ಸರಕಾರಿ ಕಾರ್ಖಾನೆಗಳನ್ನು ಮುಚ್ಚಲಾಯಿತು. ಈಗ ಉಳಿದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಆದುದರಿಂದ ಜೂ. 6 ರಂದು ಮೈಸೂರು ಬ್ಯಾಂಕ್ ವೃತ್ತದಿಂದ ಕನಕಪುರದವರೆಗೆ ಮೇಕೆದಾಟು ಜಾರಿಗೆ ಆಗ್ರಹಿಸಿ ಮೆರವಣಿಗೆ, ಜೂ. 8 ರಂದು ಹಿಂದಿ ಹೇರಿಕೆ ಮತ್ತು ಮಲಯಾಳಂ ಕಡ್ಡಾಯ ಖಂಡಿಸಿ ಕಾಸರಗೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತದೆ. ಇನ್ನುಳಿದಂತೆ ರೈತರ ಸಾಲ ಮನ್ನಾ ಸೇರಿದಂತೆ ಹಲವು ವಿಷಯಗಳ ಕುರಿತು ಜೂ.12 ರಂದು ನಡೆಯುವ ಬಂದ್ ವೇಳೆ ಸರಕಾರದ ಗಮನ ಸೆಳೆಯಲಾಗುತ್ತದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News