ಪೊಲೀಸರಿಂದ ದಾಖಲಾತಿ ಪರಿಶೀಲನೆ
ಶಿವಮೊಗ್ಗ, ಮೇ 26: ನಗರದ ಬಿ.ಎಚ್.ರಸ್ತೆಯಲ್ಲಿರುವ ಕಾರ್ಪೊ ರೇಷನ್ ಬ್ಯಾಂಕ್ ಶಾಖೆಯಲ್ಲಿ ರೈತರ ಸಾಲ ಮಂಜೂರಾತಿಯಲ್ಲಿ ಕೋಟ್ಯಂತರ ರೂ. ವಂಚನೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಬ್ಯಾಂಕ್‌ಗೆ ಭೇಟಿ ನೀಡಿ ದಾಖಲಾತಿಗಳ ತಪಾಸಣೆ ನಡೆಸಿದರು.
ಗುರುವಾರ ಸಂಜೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್, ಸಬ್ ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಸುಮಾರು 10 ಕ್ಕೂ ಅಧಿಕ ಜನರಿದ್ದ ಸಿಬ್ಬಂದಿ ತಂಡವು ಬ್ಯಾಂಕ್‌ಗೆ ದಿಢೀರ್ ಭೇಟಿ ನೀಡಿತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳ ಸಂಗ್ರಹ ಕಾರ್ಯ ನಡೆಸಿತು. ಶುಕ್ರವಾರ ಮುಂಜಾನೆಯವರೆಗೂ ಬ್ಯಾಂಕ್‌ನಲ್ಲಿ ಪೊಲೀಸ್ ಅಧಿಕಾರಿಗಳ ತಂಡವು ನಿರಂತರವಾಗಿ ದಾಖಲಾತಿಗಳ ಶೋಧ ಕಾರ್ಯಾಚರಣೆ ನಡೆಸಿ ಹಿಂದಿರುಗಿದ್ದು, ವಂಚನೆಗೆ ಸಂಬಂಧಿಸಿದ ಮಹತ್ವದ ದಾಖಲೆ ಪತ್ರಗಳು ಪೊಲೀಸರ ಕೈ ಸೇರಿವೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ದೂರು ದಾಖಲು: ಬ್ಯಾಂಕ್‌ನ ಸೀನಿಯರ್ ಮ್ಯಾನೇಜರ್ ಕಳೆದೆರೆಡು ದಿನಗಳ ಹಿಂದೆ ಬ್ಯಾಂಕ್‌ನಲ್ಲಿ ನಡೆದಿರುವ ವಂಚನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಈ ಹಿಂದೆ ಬ್ಯಾಂಕ್‌ನಲ್ಲಿ ಕೃಷಿ ಕ್ಷೇತ್ರಾಧಿಕಾರಿಯಾಗಿದ್ದ ಮಧುಸೂಧನ್‌ರಾವ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಎಫ್‌ಐಆರ್ ದಾಖಲಿಸಿಕೊಂಡ ನಂತರ ತನಿಖೆ ಚುರುಕುಗೊ ಳಿಸಿರುವ ಪೊಲೀಸರು ಇದೀಗ ಬ್ಯಾಂಕ್‌ಗೆ ದಿಢೀರ್ ಭೇಟಿ ನೀಡಿ ಸುದೀರ್ಘ ಅವಧಿಯವರೆಗೆ ದಾಖಲಾತಿಗಳ ಶೋಧ ನಡೆಸಿದ್ದಾರೆ. ಏನೀದು ಅವ್ಯವಹಾರ: ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೆಸರಿನಲ್ಲಿ ಅನಧಿಕೃತವಾಗಿ ಕೃಷಿ ಸಾಲ ಮಂಜೂರು ಮಾಡಿಕೊಂಡಿರುವುದು ಹಾಗೂ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಸಾಲ ಮಂಜೂರು ಮಾಡಿ ರೈತರಿಗೆ ಗೊತ್ತಾಗದಂತೆ ಅವರ ಖಾತೆಯಿಂದ ಬೇರೊಬ್ಬರ ಖಾತೆಗೆ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ.
ಈ ವಂಚನೆಯಲ್ಲಿ ಬ್ಯಾಂಕ್‌ನ ಕೆಲ ಸಿಬ್ಬಂದಿಗಳೇ ಭಾಗಿಯಾಗಿದ್ದರು ಎಂಬ ಆರೋಪವಿದ್ದು, ರೈತರು ತಮಗೆ ಆಗಿರುವ ವಂಚನೆ ಅರಿತು ಕಂಗಲಾಗಿ, ಇತ್ತೀಚೆಗೆ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಬ್ಯಾಂಕ್‌ನವರು ವಂಚನೆಗೊಳಗಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.