×
Ad

​ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ: ವೆಂಕಟೇಶ್

Update: 2017-05-26 22:58 IST

ಮಡಿಕೇರಿ, ಮೇ 26: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಹತ್ತು ಹಲವು ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಪ್ರಸಕ್ತ ವರ್ಷ ರಾಜ್ಯದ ಒಂದು ಸಾವಿರ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯವನ್ನು ಕಲ್ಪಿಸಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಯಿಂದ 6 ಮಂದಿ, ನಗರಸಭೆಯಿಂದ 4 ಮಂದಿ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಿಂದ ತಲಾ ಮೂವರನ್ನು ಸಿಂಗಾಪುರ ಪ್ರವಾಸಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಸಂಬಂಧ ಪಾಸ್‌ಪೋರ್ಟ್ ಸಿದ್ಧವಾಗುತ್ತಿದೆ ಎಂದು ಆಯೋಗದ ಅಧ್ಯಕ್ಷರು ಮಾಹಿತಿ ನೀಡಿದರು.

ಇಡೀ ನಗರ, ಪಟ್ಟಣವನ್ನು ಶುಚಿಗೊಳಿಸುವ ಪೌರಕಾರ್ಮಿಕರ ಬದುಕು ಉತ್ತಮ ಪಡಿಸುವ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ, ಬೆಳಗಿನ ಉಪಹಾರ ಯೋಜನೆ, ಆರೋಗ್ಯ ಭದ್ರತೆಗಾಗಿ ಜ್ಯೋತಿ ಸಂಜೀವಿನಿ, ಪೌರಕಾರ್ಮಿಕರ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯು ವಂತಾಗಲು ಪ್ರತಿಷ್ಠಿತ ಶಾಲೆಗಳಿಗೆ ಉಚಿತ ಪ್ರವೇಶ, ಮದುವೆ ಹಾಗೂ ಸಭೆ ಸಮಾರಂಭಗಳಿಗೆ ಅನುಕೂಲವಾಗಲು ಸಮುದಾಯ ಭವನ ಹೀಗೆ ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.

ಪೌರಕಾರ್ಮಿಕರು ಸಹ ಇತರರಂತೆ ಬದುಕು ಕಟ್ಟಿಕೊಳ್ಳು ವಂತಾಗಬೇಕು. ಮಲ ಹೊರುವ ಪದ್ಧತಿ ಕೊನೆಯಾಗಬೇಕು. ಸರಕಾರಿ ಆಸ್ಪತ್ರೆಯಲ್ಲಿ 70 ಮಂದಿ ಕೆಲಸ ಮಾಡಬೇಕಿದೆ. ಕೇವಲ 31 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಇದಕ್ಕೂ ಮೊದಲು ಅಧಿಕಾರಿಗಳ ಜೊತೆ ಸಭೆೆ ನಡೆಸಿದ ಅಧ್ಯಕ್ಷರು ಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡುತ್ತಿಲ್ಲ ಎಂಬ ದೂರುಗಳು ಎಲ್ಲೆಡೆ ಕೇಳಿ ಬರುತ್ತಿವೆ.

ಆದ್ದರಿಂದ ಈ ಸಂಬಂಧ ವೇತನ ಪಾವತಿ, ಇತರ ಸರಕಾರಿ ಸೌಲಭ್ಯಗಳು ಮತ್ತಿತರ ಸಂಬಂಧ ಒಂದು ವಾರದೊಳಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷರು ಸ್ಪಷ್ಟ ನಿರ್ದೇಶನ ನೀಡಿದರು. ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷಿತ ಪರಿಕರಗಳನ್ನು ನೀಡಬೇಕು, ಪೊಲೀಸರು ಹೇಗೆ ತಮ್ಮ ಕರ್ತವ್ಯ ಸಂದಭರ್ದಲ್ಲಿ ಟೋಪಿ, ಬೂಟು, ಉಪಯೋಗಿಸುತ್ತಾರೋ ಅದೇ ರೀತಿ ಪೌರಕಾರ್ಮಿಕರು ಸಹ ಗಂಬೂಟು, ಗ್ಲೌಸ್ ಮತ್ತಿತರ ಸುರಕ್ಷಿತ ಪರಿಕರಗಳನ್ನು ಉಪಯೋಗಿಸಿ ಕರ್ತವ್ಯ ನಿರ್ವಹಿಸಬೇಕು.

ಇಲ್ಲದಿದ್ದರೆ ಅವರನ್ನು ಅನಾರೋಗ್ಯಕ್ಕೆ ದೂಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ ಮಾತನಾಡಿ ದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಸಿಇಒ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಸಫಾಯಿ ಕರ್ಮಚಾರಿ ಆಯೋಗದ ಉಪ ನಿರ್ದೇಶಕ ಮಂಜುನಾಥ್, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಮುಹಮ್ಮದ್ ಮುನೀರ್, ಪೌರಾಯುಕ್ತೆ ಬಿ.ಶುಭಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಾಯಾದೇವಿ ಗಲಗಲಿ, ಪಪಂ ಮುಖ್ಯಾಧಿಕಾರಿಗಳಾದ ಕೃಷ್ಣ ಪ್ರಸಾದ್, ಶ್ರೀಧರ ಇತರರು ತಮ್ಮ ಇಲಾಖಾ ವ್ಯಾಪ್ತಿಯ ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕುಮಾರ, ಬಿ.ಸಿ.ಎಂ. ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಮ್ತಾಜ್, ರಘು ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News