ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ: ಕಾಂಗ್ರೆಸ್ ಟೀಕೆ

Update: 2017-05-27 11:27 GMT

ಚಿಕ್ಕಮಗಳೂರು, ಮೇ.27: ಮೋದಿ ನೇತ್ರೃತ್ವದ ಕೇಂದ್ರ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ. ಮೋದಿ ಆಡಳಿತಾವಧಿಯಲ್ಲಿ ಸಾಮಾನ್ಯ ಭಾರತೀಯರ ಆಶೋತ್ತರಗಳು ನಲುಗುತ್ತಿವೆ ಎಂದು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಡಾ.ಡಿ.ಎಲ್. ವಿಜಯ ಕುಮಾರ ಟೀಕಿಸಿದ್ದಾರೆ.

 ಅವರು ಶನಿವಾರ ಈ ಕುರಿತು ಹೇಳಿಕೆ ನೀಡಿದ್ದು, ಮೋದಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ವಾರ್ಷಿಕ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ಅವರ ಆಡಳಿತಾವಧಿಯಲ್ಲಿ ಉದ್ಯೋಗ ಸೃಷ್ಟಿಗಿಂತ ಉದ್ಯೋಗಗಳು ನಶಿಸುವ ಸಂಖ್ಯೆ ಹೆಚ್ಚಾಗಿದೆ. ಐಟಿ ಕ್ಷೇತ್ರವೊಂದರಲ್ಲೇ ಮುಂದಿನ 3 ವರ್ಷದ ಅವಧಿಯಲ್ಲಿ 6 ಲಕ್ಷ ಉದ್ಯೋಗಗಳು ಕಡಿತಗೊಳ್ಳಲಿವೆ ಎಂದು ಪ್ರತಿಷ್ಠಿತ ಔದ್ಯೋಗಿಕ ಸೇವಾ ಸಂಸ್ಥೆಯಾದ ಹೆಡ್ ಹಂಟರ್ಸ್‌ ಇಂಡಿಯಾ ವರದಿ ಮಾಡಿದೆ ಎಂದಿದ್ದಾರೆ.
 

2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಮೋದಿ 2015ರಲ್ಲಿ ಕೇವಲ 1.35 ಲಕ್ಷ ಉದ್ಯೋಗ ಸೃಷ್ಟಸಿದ್ದಾರೆ. 2011ರಲ್ಲಿ ಯುಪಿಎ ಅವಧಿಯಲ್ಲಿ 9.30 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದನ್ನು ಗಮನಿಸಿದರೆ ಇದು ಎಷ್ಟು ಕಳಪೆ ಎನ್ನುವುದು ಅರಿವಾಗುತ್ತದೆ. ಕಾರ್ಮಿಕ ಇಲಾಖೆಯ ಅಂಕಿ ಅಂಶಗಳೇ ಈ ವಿಷಯವನ್ನು ಹೇಳುತ್ತಿವೆ ಎಂದಿರುವ ಅವರು, ನೋಟುಗಳನ್ನು ರದ್ದತಿ ನಿರ್ಧಾರದಿಂದ 6 ತಿಂಗಳೇ ಕಳೆದರೂ ಉತ್ಪಾದನಾ ವಲಯ ಚೇತರಿಸಿಕೊಂಡಿಲ್ಲ. ಕೈಗಾರಿಕಾ ಉತ್ಪಾದನಾ ಕೋಷ್ಠಕದ ಅಂಕಿಅಂಶಗಳನ್ನೇ ಆಧರಿಸಿ ಹೇಳುವುದಾದರೆ ಜನವರಿಯಲ್ಲಿ ಶೇ.3 ಇದ್ದ ಸಾಂಪ್ರದಾಯಿಕ ಉತ್ಪದನಾ ವಲಯದ ವೃದ್ಧಿ ದರ, ಫೆಬ್ರವರಿಯಲ್ಲಿ ಶೇ.1.4ಕ್ಕೆ ಇಳಿಯಿತು. ಮಾರ್ಚ್‌ನಲ್ಲಿ ಇದು ಶೇ.1.2 ಆಯಿತು ಎಂದು ವಿವರ ನೀಡಿದ್ದಾರೆ.

ಮೋದಿಯವರ ವಿದೇಶಾಂಗ ನೀತಿಯು ಜಾಗತಿಕ ನಾಯಕರೊಂದಿಗೆ ಸೆಲ್ಫಿಗಳು, ಆತ್ಮೀಯ ಆಂಗಿಕ ತೋರಿಕೆಗಳು ಹಾಗೂ ಉದ್ದುದ್ದ ಭಾಷಣಗಳಾಚೆಗೆ ಸಾಗುತ್ತಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ತಮ್ಮ ವೈಯಕ್ತಿಕ ವರ್ಚಸ್ಸನ್ನು ಜಾಗತಿಕವಾಗಿ ಹೆಚ್ಚಿಸಿಕೊಳ್ಳಬೇಕೆನ್ನುವ ಭರದಲ್ಲಿ ಮೋದಿಯವರು ವಿದೇಶಾಂಗ ನೀತಿಯ ವಿನ್ಯಾಸವನ್ನೇ ಅರಿಯದೆ ಹೆಜ್ಜೆ ಇಟ್ಟಿರುವುದು. ತನ್ನ ಸುತ್ತಲಿರುವ ಸಾರ್ಕ್ ದೇಶಗಳೊಂದಿಗೆ ಸ್ನೇಹವನ್ನು ವೃದ್ಧಿಸಿಕೊಳ್ಳುವಲ್ಲಿ ಮೋದಿಯವರು ಗಣನೀಯವೆನ್ನುವ ಪ್ರಯತ್ನ ಮಾಡುತ್ತಿಲ್ಲ. ಪರಿಣಾಮ ನೇಪಾಳವೂ ಸೇರಿದಂತೆ ಭಾರತವನ್ನು ಆತುಕೊಂಡಿದ್ದ ನೆರೆಯ ರಾಷ್ಷ್ರಗಳೂ ಸಹ ಚೀನಾದತ್ತಲೇ ಮುಖ ಮಾಡಿವೆ ಎಂದರು.

 2014 ರ ಚುನಾವಣೆಯ ಬಿಜೆಪಿಯ ಪ್ರನಾಳಿಕೆಯಲ್ಲಿ ರೈತರ ಬೆಳೆಗಳಿಗೆ ಶೇ.50 ಬೆಂಬಲ ಬೆಲೆಯನ್ನು ಕೊಡುವುದಾಗಿ ಘೋಷಿಸಲಾಗಿತ್ತು. ತದ್ವಿರುದ್ದವಾಗಿ 20ನೇ ಫಬ್ರವರಿ 2015 ರಲ್ಲಿ ಕೇಂದ್ರ ಸರಕಾರವು ರೈತರಿಗೆ ಬೆಂಬಲ ಬೆಲೆ ಕೊಡಲಾಗದು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತು ಇದು ರೈತರ ಪರವಾಗಿ ಕಾಳಜಿಯೇ? ಇದೆಲ್ಲವನ್ನು ಗಮನಿಸಿದಾಗ ಮೋದಿ ನೇತೃತ್ವದ ಕೇಂದ್ರ ಸರಕಾರ ಆಕಾಶದೆತ್ತರ ಆಶ್ವಾಸನೆ ಹಾಗೂ ಪ್ರಚಾರವನ್ನು ಜನರಿಗೆ ನೀಡಿ, ಅಂಗೈ ಅಗಲ ಸಾಧನೆ ಮಾಡಿ ಬಡಾಯಿ ಕೊಚ್ಚಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News