ಗೋ ಹತ್ಯೆ ನಿಷೇಧ ಜನರ ಭಾವನೆಗಳ ಮೇಲೆ ಚೆಲ್ಲಾಟ: ಉಗ್ರಪ್ಪ ವಾಗ್ದಾಳಿ

Update: 2017-05-27 14:22 GMT

ಬೆಂಗಳೂರು, ಮೇ 27: ಕೇಂದ್ರ ಸರಕಾರ ತನ್ನ ಮೂರು ವರ್ಷದ ಆಡಳಿತಾವಧಿಯಲ್ಲಿ ಜನಪರವಾದ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಜನರ ಭಾವನೆಗಳ ಮೇಲೆ ಚೆಲ್ಲಾಟವಾಡುವ ಮೂಲಕ ತನ್ನ ಸ್ವಾರ್ಥ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

 ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಈ ದೇಶದ ಕೃಷಿ ಹಾಗೂ ಗ್ರಾಮಾಂತರ ಬದುಕಿನ ಕುರಿತು ಕಿಂಚಿತ್ತೂ ಕಾಳಜಿಯಿಲ್ಲವೆಂಬುದನ್ನು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಸ್ಪಷ್ಟವಾಗಿ ಸಾಬೀತು ಪಡಿಸಿದೆ ಎಂದು ಟೀಕಿಸಿದರು.

ಕೆಲವರನ್ನು ತೃಪ್ತಿ ಪಡಿಸುವ ಸಲುವಾಗಿ ಕೇಂದ್ರ ಸರಕಾರ ದೇಶ ಕೃಷಿ ಆರ್ಥಿಕತೆ ಹಾಗೂ ಬಹುಸಂಖ್ಯಾತರು ತಿನ್ನುವ ಆಹಾರದ ಮೇಲೆ ಚಪ್ಟಡಿ ಕಲ್ಲನ್ನು ಎಳೆದಿದೆ. ದನದ ಮಾಂಸ ದ ಮಾರುಕಟ್ಟೆ ನಂಬಿಕೊಂಡು ಲಕ್ಷಾಂತರ ಜನರು ಬದುಕನ್ನು ಕಟ್ಟಿಕೊಂಡಿದ್ದಾರೆ. ಬಿಜೆಪಿಗೆ ಜನರ ಬದುಕಿಗಿಂತ ಜನವಿರೋಧಿ ಸಿದ್ಧಾಂತವೇ ಮುಖ್ಯವಾಗಿದೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಕೃಷಿಗಾಗಿ ಗೋವನ್ನು ಮಾರಾಟ ಮಾಡಬಹುದೆಂದು ಗೋ ಹತ್ಯೆ ನಿಷೇಧ ಕಾನೂನಿನಲ್ಲಿ ತಿಳಿಸಲಾಗಿದೆ. ಆದರೆ, ರೈತರು ಗೋ ಮಾರಾಟಕ್ಕೂ ಅಧಿಕಾರಿಗಳಿಂದ ಪರವಾನಿಗೆ ಪತ್ರ ತೆಗೆದುಕೊಳ್ಳಬೇಕು. ನಮ್ಮದೇ ಜಾನುವಾರುಗಳನ್ನು ಕೊಳ್ಳಲು-ಮಾರಾಟ ಮಾಡಲು ಅಧಿಕಾರಿಗಳ ಬಳಿ ತಿರುಗಾಡಬೇಕಾದ ಪ್ರಸಂಗವನ್ನು ಸೃಷ್ಟಿಸಿರುವ ಕೇಂದ್ರ ಸರಕಾರಕ್ಕೆ ಜನಸಾಮಾನ್ಯರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲವೆಂದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ಧಾರ್ಮಿಕ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಪರಾಧವೆಂದು ಸಂವಿಧಾನದಲ್ಲಿ ಸ್ಪಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಬಿಜೆಪಿ ಪ್ರಾರಂಭದಿಂದಲೇ ಚುನಾವಣೆ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಷಯವನ್ನು ಪ್ರಸ್ತಾಪಿಸುತ್ತಲೇ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಚುನಾವಣೆ ಆಯೋಗ ಬಿಜೆಪಿ ಪಕ್ಷವನ್ನೇ ಅಸಿಂಧುವೆಂದು ಘೋಷಿಸಬೇಕು.

-ಉಗ್ರಪ್ಪ ಸದಸ್ಯ ವಿಧಾನಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News