ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಕೊಲೆಗೆ ಯತ್ನ: ಆರೋಪಿ ಸೆರೆ

Update: 2017-05-27 16:42 GMT

ಮಂಡ್ಯ, ಮೇ 27: ನಗರದ ಜಿಲ್ಲಾಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಕೊಲೆಗೆ ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಜಿಲ್ಲಾಸ್ಪತ್ರೆಯ ಗುತ್ತಿಗೆ ನೌಕರ ಹೆಬ್ಬಕವಾಡಿ ಗ್ರಾಮದ ಸುರೇಶ್ ಎಂಬಾತ ಕೊಲೆಗೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದು, ಮತ್ತೊಬ್ಬ ಆರೋಪಿ ಚಿಕ್ಕಮುಲಗೂಡಿನ ರವಿ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಕನಕಪುರ ತಾಲೂಕು ಚಿಕ್ಕಮುಂಗೋಡ್ಲು ಗ್ರಾಮದ, ಹಾಲಿ ಮಳವಳ್ಳಿ ಪಟ್ಟಣ ನಿವಾಸಿ ಷಣ್ಮುಖ ಪಾಟೀಲ್‌ಗೆ, ಮಳವಳ್ಳಿ ತಾಲೂಕು ಗೌಡಗೆರೆಯ ಜಗದಾಂಬ ಎಂಬುವರನ್ನು ವಿವಾಹ ಮಾಡಿಕೊಡಲಾಗಿತ್ತು.

ಷಣ್ಮುಖ ಪಾಟೀಲ್ ಮತ್ತು ಜಗದಾಂಬ ನಡುವೆ ವೈಷಮ್ಯ ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕಳೆದ ಎ. 24 ರಂದು ಜಗದಾಂಬ ಪತಿ ನಿಂದನೆ ಮಾಡಿದನೆಂದು ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದರು. ಆಕೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶನಿವಾರ ಸಂಜೆ ಆಸ್ಪತ್ರೆ ಸಿಬ್ಬಂದಿಯೆಂದೇಳಿಕೊಂಡು ತೀವ್ರ ನಿಗಾ ಘಟಕ ಪ್ರವೇಶಿಸಿದ ಸುರೇಶ್, ರವಿ, ಜಗದಾಂಬ ಅವರ ಬಾಯಿಗೆ ಹಾಕಿದ್ದ ಮಾಸ್ಕ್ ತೆಗೆದು ಕೊಲೆಗೆ ಯತ್ನಿಸಿದ್ದರು, ಅದನ್ನು ಅರಿತ ಜಗದಾಂಬ ಸೋದರಿ ಆದ್ಯ ಕೂಗಿ ಕೊಂಡಿದ್ದಾಳೆ.

ತಕ್ಷಣ ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಸುರೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ರವಿ ಪರಾರಿಯಾಗಿದ್ದಾನೆ. ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News