​ಗೋಹತ್ಯೆ ನಿಷೇಧ ಸುತ್ತೋಲೆ ಹಿಂಪಡೆಯದಿದ್ದರೆ ಹೋರಾಟ: ಡಿಎಸ್‌ಎಸ್ ಎಚ್ಚರಿಕೆ

Update: 2017-05-28 12:06 GMT

ಚಿಕ್ಕಮಗಳೂರು, ಮೇ.28: ಮೋದಿ ನೇತೃತ್ವದ ಕೇಂದ್ರ ಸರಕಾರ ಗೋ ಹತ್ಯೆ ನಿಷೇಧಕ್ಕೆ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುವ ಸುತ್ತೋಲೆ ಹೊರಡಿಸಿದ್ದನ್ನು ಹಿಂಪಡೆಯದಿದ್ದರೆ ಭವಿಷ್ಯದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ,ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ವಸಂತ ಕುಮಾರ್ ತಿಳಿಸಿದ್ದಾರೆ.

ಅವರು ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಕೇಂದ್ರ ಸಕರಾರವು ಬಹುಜನರ ಆಹಾರ ಪದಾರ್ಥವಾದ ದನದ ಮಾಂಸ ಮಾರಾಟವನ್ನು ನಿಷೇಧಿಸುವುದಕ್ಕಾಗಿಯೇ ಹತ್ಯೆಗಾಗಿ ಜಾನುವಾರು ಮಾರಾಟದ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿರುವುದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
 

ಹಿಂದುಗಳು ಅನಾದಿ ಕಾಲದಿಂದಲೂ ಗೋಹತ್ಯೆಯನ್ನು ವಿರೋಧಿಸುತ್ತಾರೆ ಎಂದು ಸುಳ್ಳು ಬಿಂಬಿಸಲಾಗುತ್ತಿದೆ. ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಪುರೋಹಿತ ಪುರೋಹಿತನಾಗಿ ಉಳಿಯುತ್ತಿರಲಿಲ್ಲ. ಸನ್ಯಾಸಿಗಳು, ಸಾಧು ಸಂತರು, ರಾಜ ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮವಾದ ಗೂಳಿಯನ್ನು ಕಡಿದು ಅಡುಗೆ ಮಾಡಿ ಅವರಿಗೆ ಬಡಿಸಿ ತೃಪ್ತಿಪಡಿಸುತ್ತಿದ್ದರು. ಯಜ್ಞ, ಯಾಗಾದಿಗಳಿಗೆ4 ಪಶು ಬಲಿ ಕೊಟ್ಟು ಅದನ್ನು ಅಡುಗೆ ಮಾಡಿ ತಿಂದು ಉಳಿದದ್ದನ್ನು ಶೂದ್ರಾತೀಶೂದ್ರರಿಗೆ ಕೊಡುತ್ತಿದ್ದರು ಎಂದಿದ್ದಾರೆ.

ಸರಕಾರ ಮನುಷ್ಯ ತಿನ್ನುವ ಒಂದು ಆಹಾರ ಪದಾರ್ಥವನ್ನು ನಿಷೆಧಿಸಬೇಕಾದರೆ ಅದು ವಿಷ ಕಾರಿಯಾಗಿರಬೇಕು. ಆದರೆ ಇದು ಅನೇಕ ಖಾಯಿಲೆಗಳಿಗೆ ಸಿದ್ದ ಔಷಧಿಯಾಗಿದೆ. ಬಡವರು. ಮಧ್ಯಮ ವರ್ಗದವರಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಆಹಾರ ಸೇವನೆಯ ಮಾರ್ಗವಾಗಿದೆ. ಹೀಗಿರುವಾಗ ಸರ್ಕಾರದ ಅವೈಜ್ಞಾನಿಕ ಆದೇಶದಿಂದ ಮಾಂಸ ಉದ್ದಿಮೆಗೆ ಹಾಗೂ ಕಾರ್ಮಿಕ ವರ್ಗಕ್ಕೆ ತಡೆಯಲಾಗದ ಪೆಟ್ಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

 ವಾರ್ಷಿಕವಾಗಿ ಮಾಂಸ ಮಾರಾಟದಿಂದ ಬರುವ 30 ಸಾವಿರ ಕೋಟಿ ರೂ. ಗಳು ನಷ್ಟವಾಗಲಿದೆ. ವಯಸ್ಸಾದ ಕೃಷಿಗೆ ಯೋಗ್ಯವಲ್ಲದ ದನಕರುಗಳ ಪೋಷಣೆಯ ಹೊಣೆ ಯಾರು ಹೊರಬೇಕು ಎಂದು ಪ್ರಶ್ನಿಸಿರುವ ಅವರು, ಹೀಗೆ ಜನಾಭಿಪ್ರಾಯದ ವಿರುದ್ದವಿರುವ ಹತ್ಯೆಗಾಗಿ ಜಾನುವಾರು ಮಾರಾಟದ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಡಿಎಸ್‌ಎಸ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ಹೋರಾಟವನ್ನು ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News