ಚಿತ್ರದುರ್ಗ: ಕ್ಷಿಪಣಿ ಘಟಕಕ್ಕೆ ಸಚಿವ ಜೇಟ್ಲಿ ಚಾಲನೆ

Update: 2017-05-28 16:56 GMT

ಚಳ್ಳಕೆರೆ, ಮೇ 28: ದೇಶದ ರಕ್ಷಣಾ ಕ್ಷೇತ್ರದ ವೈಮಾನಿಕ ಪರೀಕ್ಷಾವಲಯದಿಂದಲೂ ತನ್ನ ಹಿರಿಮೆ ಹೆಚ್ಚಿಸಿಕೊಂಡಿರುವ ಕರ್ನಾಟಕ ರಾಜ್ಯ ಕೇವಲ ಐ.ಟಿ ವಿಭಾಗದಲ್ಲಿ ಮಾತ್ರ ಅಲ್ಲ ರಕ್ಷಣಾ ವಿಭಾಗದಲ್ಲೂ ಮುಂಚೂಣಿಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದ ಬಳಿ 330 ಕೋಟಿ ರೂ. ವೆಚ್ಚದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಾಗಿ (ಡಿಆರ್‌ಡಿಒ) ಏರೋ ನಾಟಿಕಲ್‌ಡೆವಲೆಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಸಂಸ್ಥೆ ನೂತನವಾಗಿ ಸ್ಥಾಪಿಸಿರುವ ವೈಮಾನಿಕ ಪರೀಕ್ಷಾ ವಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


  ಡಿಆರ್‌ಡಿಒದಿಂದ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಅಭಿವೃದ್ಧಿಯಾಗಲಿದ್ದು, ರಕ್ಷಣಾ ವ್ಯವಸ್ಥೆಯನ್ನು ಶಕ್ತಿಯುತಗೊಳಿಸಬೇಕಿದೆ. ಇನ್ನೂ 5 ವರ್ಷದಲ್ಲಿ ಚಿತ್ರದುರ್ಗ ಜಿಲ್ಲೆಯು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ ಎಂದ ಅವರು, ವಿಶ್ವಮಟ್ಟದಲ್ಲಿ ರಕ್ಷಣಾ ಸಂಶೋಧನೆಗೆ ಡಿಆರ್‌ಡಿಒ  ಮುನ್ನುಡಿಯಾಗಿದ್ದು, ಡಿಆರ್‌ಡಿಒ ನಿರ್ಜನ ಪ್ರದೇಶದಲ್ಲಿ ಸ್ಥಾಪನೆಯಾ ಬೇಕಾಗಿದ್ದ ಕಾರಣ ಚಿತ್ರದುರ್ಗದ ಈ ಪ್ರದೇಶವನ್ನು ಆಯ್ಕೆ ಮಾಡಲಾಗಿದ್ದು, ಮಾನವರಹಿತ ಯುದ್ಧವಿಮಾನಗಳ ಪರೀಕ್ಷೆ ಇಲ್ಲಿ ನಡೆಯಲಿದೆ.


ಮಾನವ ರಹಿತ ಯುದ್ಧ ವಿಮಾನಗಳು ರಕ್ಷಣೆಯ ಜತೆಗೆ ಜಾಗತಿಕ ಮಟ್ಟದ ವಿಷ್ಯದ ಸಂಶೋಧನೆಗೂ ಸಹಕಾರಿಯಾಗಲಿವೆ. ಆದ್ದರಿಂದ ವೈಮಾನಿಕ ಪರೀಕ್ಷಾ ಕ್ಷೇತ್ರ ಉಪಯುಕ್ತವಾಗಿದೆ. ಡಿಆರ್‌ಡಿಒ 20 ವರ್ಷದ ಗುರಿಯನ್ನು 5 ವರ್ಷದಲ್ಲಿ ಪೂರ್ಣಗೊಳಿಸಿ ಮುನ್ನೆಡೆಯುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜನಾರ್ಧನಸ್ವಾಮಿ, ಶಾಸಕ ಎಸ್.ತಿಪ್ಪೇಸ್ವಾಮಿ ಹಾಗೂ ಡಿಆರ್‌ಡಿಒ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News