ಕೊಡಗು: ಇಂದಿನಿಂದ ಶಾಲೆಗಳು ಪುನಾರಂಭ

Update: 2017-05-28 16:58 GMT

ಮಡಿಕೇರಿ, ಮೇ 28: ಬೇಸಿಗೆ ಸರಿದು ಮುಂಗಾರಿಗೆ ಮೈಯೊಡ್ಡಲು ಕಾತುರದಿಂದ ಕಾಯುತ್ತಿರುವ ಕೊಡಗು ಜಿಲ್ಲೆಯಾದ್ಯಂತ ಮೇ 29ರಿಂದ ಶಾಲೆಗಳು ಆರಂಭಗೊಳ್ಳುತ್ತಿದ್ದು, ಬೇಸಿಗೆ ರಜಾ-ಮಜಾವನ್ನು ಮುಗಿಸಿರುವ ವಿದ್ಯಾರ್ಥಿಗಳು ಶಾಲೆ ಕಡೆಗೆ ಮುಖ ಮಾಡಲು ತಯಾರಿ ನಡೆಸಿದ್ದಾರೆ.


ಜಿಲ್ಲೆಯ ಸುಮಾರು 495 ಶಾಲೆಗಳು ಪುನರಾ ರಂಭಗೊಳ್ಳುತ್ತಿದ್ದು, ಶಿಕ್ಷಣ ಇಲಾಖೆ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಂಡಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 153 ಸರಕಾರಿ ಪ್ರಾಥಮಿಕ ಶಾಲೆಗಳಿದ್ದು, 23 ಪ್ರೌಢಶಾಲೆ ಹಾಗೂ 15 ಅನುದಾನಿತ ಶಾಲೆಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ 123 ಸರಕಾರಿ ಪ್ರಾಥಮಿಕ, ತಲಾ 15 ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆ, ಮಡಿಕೇರಿ ತಾಲೂಕಿನಲ್ಲಿ 122 ಸರಕಾರಿ ಪ್ರಾಥಮಿಕ ಶಾಲೆ, 11 ಪ್ರೌಢಶಾಲೆ ಹಾಗೂ 18 ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 495 ಶಾಲೆಗಳು ಸೋಮವಾರದಿಂದ ಪುನರಾರಂಭಗೊಳ್ಳಲಿವೆ.


ಶಾಲೆಗಳು ಮೇ 29ರಂದೇ ಆರಂಭವಾಗುತ್ತಿದ್ದರೂ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಲ್ಲಿ ಹುರುಪು ತುಂಬುವ ಹಿನ್ನೆಲೆಯಲ್ಲಿ ಜೂ.2ರಂದು ನಗರದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.ನಗರದ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಹಾಗೂ ಸಾಕ್ಸ್‌ಗಳು, ಸೈಕಲ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ.

ಸಾಮಾನ್ಯವಾಗಿ ಶೈಕ್ಷಕಣಿಕ ವರ್ಷ ಅರ್ಧ ಮುಗಿದರೂ ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರ ಸರಬರಾಜಾಗುತ್ತಿರಲಿಲ್ಲ. ಆದರೆ ಈ ವರ್ಷ ಸಮವಸ್ತ್ರ ಸಿದ್ಧವಾಗಿದ್ದು, ಬಹುತೇಕ ಪಠ್ಯಪುಸ್ತಕಗಳು ಬಂದಿವೆ. ಅದೇ ರೀತಿ ಜಿಲ್ಲೆಗೆ ನಾಲ್ಕು ಸಾವಿರ ಸೈಕಲ್‌ಗಳು ಪೂರೈಕೆಯಾಗುತ್ತಿವೆ. ಇವುಗಳನ್ನು ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದ್ದಾರೆ.


ಈ ಬಾರಿ ಶೂ ಹಾಗೂ ಸಾಕ್ಸ್‌ಗಳನ್ನು ಖರೀದಿಸುವ ಜವಾಬ್ದಾರಿಯನ್ನು ಆಯಾ ಶಾಲೆಗಳಿಗೆ ವಹಿಸಲಾಗಿದ್ದು, ಇದಕ್ಕಾಗಿ 1 ರಿಂದ 5ನೆ ತರಗತಿ ತನಕ ವಿದ್ಯಾರ್ಥಿಗಳಿಗೆ 265 ರೂ., 6 ರಿಂದ 8ನೆ ತರಗತಿ ತನಕ 295 ಹಾಗೂ 9 ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗೆ 325 ರೂ.ಯಂತೆ ಶಾಲೆಗಳಿಗೆ ಹಣ ಪಾವತಿಸಲಾಗಿದೆ. ಇದು ರಾಜ್ಯ ಸರಕಾರದ ಕಾರ್ಯಕ್ರಮವಾಗಿದ್ದು, ಕೇಂದ್ರ ಸರಕಾರ ಕೂಡಾ ಸಮವಸ್ತ್ರಕ್ಕೆ ಪ್ರತೀ ವಿದ್ಯಾರ್ಥಿಗೆ ತಲಾ 200 ರೂ.ನ್ನು ನೀಡುತ್ತಿದೆ.


ಕ್ಷೀರಭಾಗ್ಯ ಯೋಜನೆಯನ್ನು ಈ ಬಾರಿ 1ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗೆ ವಾರದ ಐದು ದಿನಗಳಿಗೆ ವಿಸ್ತರಿಸಲಾಗಿದೆ. ಹಾಲು, ಸಿಹಿಯೊಂದಿಗೆ ಬಿಸಿಯೂಟವನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿ ಶಾಲೆಯತ್ತ ತೆರಳಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಸಾಮಾನ್ಯವಾಗಿ ಸರಕಾರಿ ಶಾಲೆಗಳು ಆರಂಭವಾದರೂ ಪೂರ್ಣ ಪ್ರಮಾಣದ ಹಾಜರಾತಿಗೆ ಸುಮಾರು ಒಂದು ತಿಂಗಳ ಕಾಲ ಕಾಯಬೇಕಿದೆ. ವಿದ್ಯಾರ್ಥಿಗಳು ಅದರಲ್ಲಿಯೂ ಕೂಲಿ ಕಾರ್ಮಿಕರ ಮಕ್ಕಳು ಶಾಲೆಯತ್ತ ಆರಂಭದ ದಿನದಿಂದ ಆಗಮಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಶಾಲೆ ಆರಂಭವಾದ ಮೊದಲ ವಾರದಲ್ಲಿಯೇ ಶಾಲೆಗೆ ಕರೆ ತರಲು ಶಿಕ್ಷಣ ಇಲಾಖೆ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಎಲ್ಲ್ಲ ಶಿಕ್ಷಕರಿಗೆ ಹಾಗೂ ಶಾಲಾಭಿವೃದ್ಧಿ ಸಮಿತಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಮಲ್ಲೇಸ್ವಾಮಿ ತಿಳಿಸಿದರು.


ಜೂ.2ರಂದು ನಡೆಯುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಡಿಸಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಎಸ್ಪಿ ರಾಜೇಂದ್ರ ಪ್ರಸಾದ್, ಜಿಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿಗೋಪಾಲ್, ಸಿಇಒ ಚಾರುಲತಾ ಸೋಮಲ್ ಮತ್ತಿತರರು ಭಾಗವಹಿಸಲಿದ್ದಾರೆ.

ಪ್ರಸಕ್ತ ವರ್ಷ ಸಮವಸ್ತ್ರ ಸಿದ್ಧವಾಗಿದ್ದು, ಬಹುತೇಕ ಪಠ್ಯಪುಸ್ತಕಗಳು ಬಂದಿವೆ. ಅದೇ ರೀತಿ ಜಿಲ್ಲೆಗೆ ನಾಲ್ಕು ಸಾವಿರ ಸೈಕಲ್‌ಗಳು ಪೂರೈಕೆಯಾಗುತ್ತಿವೆ. ಇವುಗಳನ್ನು ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿತರಿಸಲಾಗುವುದು.
ಮಲ್ಲೇಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News