ಜಾನುವಾರು ಮಾರಾಟ ನಿಷೇಧ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

Update: 2017-05-29 17:39 GMT

ಮಂಡ್ಯ, ಮೇ 29: ದೇಶಾದ್ಯಂತ ಜಾನುವಾರು ಮಾರಾಟ, ಹತ್ಯೆ ನಿಷೇಧಿಸಿರುವ ಕೇಂದ್ರ ಸರಕಾರದ ಕ್ರಮ ಹಾಗೂ ತೆಲಾಂಗಣದಲ್ಲಿ ಚರ್ಚ್ ಮೇಲಿನ ದಾಳಿ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ವಿವೇಚಾನರಹಿತ ಕ್ರಮದಿಂದ ಸುಮಾರು ಒಂದು ಲಕ್ಷ ಕೋಟಿ ರೂ.ಗಳ ವಹಿವಾಟಿನ ಮಾಂಸ ಮಾರುಕಟ್ಟೆ ಬಾಧಿತವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಕ್ರಮದಿಂದ ರೈತಾಪಿ ಜನರು ಉಪಯೋಗವಿಲ್ಲದ ಜಾನುವಾರುಗಳನ್ನು ರಕ್ಷಣೆ ಮಾಡುವುದು ಕಷ್ಟವಾಗಿದೆ. ಜೀವನ ಸಾಗಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ವಯಸ್ಸಾದ ರಾಸುಗಳಿಗೆ ಮೇವು ಒದಗಿಸುವುದು ಹೇಗೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಗೋವುಗಳ ರಕ್ಷಣೆ ಎಂಬುದು ಕೇಂದ್ರ ಸರಕಾರ ಮುಸ್ಲಿಂಮರು, ದಲಿತರ ಮೇಲೆ ನಡೆಸುವ ಒಂದು ಛಾಯಾ ಯುದ್ಧವಾಗಿದೆ. ಗುಜರಾತಿನ ಊನಾದಲ್ಲಿ ದಲಿತರ ಮೇಲಿನ ಭೀಕರ ಥಳಿತ ಹಾಗೂ ರಾಜಸ್ತಾನದಲ್ಲಿ ಪೆಹಲೂ ಖಾನ್‌ರ ಕೊಲೆ ಘಟನೆಗಳ ಇದಕ್ಕೆ ಸಾಕ್ಷಿಯಾಗಿದೆ ಎಂದು ಆಪಾದಿಸಿದರು.

ಕೇಂದ್ರದ ಕ್ರಮವು ಬಹುತೇಕ ಮುಸ್ಲಿಮರೇ ನಡೆಸುವ ಮಾಂಸ ಮತ್ತು ಧರ್ಮ ಉದ್ದಿಮೆ ಮೇಲೆ ಭಾರಿ ಪ್ರಹಾರ ನಡೆಸಲಿದ್ದು, ಈಗಾಗ ಅದು ತಥಾಕಥಿತ ಗೋರಕ್ಷಕರ ಹಿಂಸಾಕೃತ್ಯದಿಂದ ಘಾಸಿಗೊಂಡಿದೆ. ಈ ಕ್ರಮ ರೈತ ಸಮುದಾಯಕ್ಕೂ ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿವಿಧ ಸಂಸ್ಕೃತಿಯ ಜನರು ವಾಸಿಸುವ ಭಾರತದಲ್ಲಿ ಸರಕಾರವೊಂದು ಆಹಾರ ಪದ್ಧತಿ ಮೇಲೆ ನಿರ್ಬಂಧ ಹೇರುವುದು ಸಂವಿಧಾನ ವಿರೋಧಿಯಾಗಿದೆ. ಗೋಹತ್ಯೆ ನಿಷೇಧ ರಾಜ್ಯ ಸರಕಾರದ ವ್ಯಾಪ್ತಿಗೆ ಬರಲಿದ್ದು, ಕಾನೂನು ಮಾಡುವ ಅಧಿಕಾರ ಕೇಂದ್ರಕ್ಕಿಲ್ಲ ಎಂದು ಅವರು ಕಿಡಿಕಾರಿದರು.

ಬಡತನ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ದೇಶವನ್ನು ಬಾಧಿಸುತ್ತಿವೆ. ಆದರೆ, ಈ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಗೋಹತ್ಯೆ ನಿಷೇಧದಂತಹ ಕಾನೂನು ತಂದು ಜನರ ದಿಕ್ಕನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ಸರಕಾರ ಹೊರಡಿಸಿರುವ ಅಧಿಸೂಚನೆ ವಾಪಸ್ ಪಡೆಯದಿದ್ದರೆ ಆಹಾರ ಸಮಸ್ಯೆ, ನಿರುದ್ಯೋಗ ಸಮಸ್ಯೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹೇರ್, ಅಸ್ರಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ಅಸ್ಗರ್ ಅಹಮದ್, ಮರಂಕಯ್ಯ, ಎಂ.ರಫೀಕ್, ಇಬ್ರಾಹಿಂ, ವಕೀಲ ಲಕ್ಷ್ಮಣ್ ಚೀರನಹಳ್ಳಿ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ, ಕಾವೇರಿ ಕಣಿವೆ ರೈತ ಒಕ್ಕುಟದ ಎಂ.ಬಿ.ನಾಗಣ್ಣಗೌಡ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News