×
Ad

ಸರಣಿ ಕಳ್ಳತನ: ಮೂವರ ಬಂಧನ

Update: 2017-05-30 22:09 IST

ಮಡಿಕೇರಿ ಮೇ 30: ಕೊಡಗು ಜಿಲ್ಲಾ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಆರ್. ಸತೀಶ್, ವಿಜಯಪುರದ ಪ್ರಕಾಶ್ ಸಿದ್ದಪ್ಪ ಹಾಗೂ ಕೊಡಗು ಜಿಲ್ಲೆಯ ಚೆಯ್ಯಂಡಾಣೆ ಗ್ರಾಮದ ಚೇನಂಡ ಎಸ್. ಮುತ್ತಪ್ಪ ಬಂಧಿತ ಆರೋಪಿಗಳು.

ಜಿಲ್ಲೆಯಲ್ಲಿ ಸರಣಿ ಕಳ್ಳತನ ಮಾಡುವ ಮೂಲಕ ಆತಂಕ ಮೂಡಿಸಿದ್ದ ಅಂತರ್ ಜಿಲ್ಲಾ ಕಳ್ಳರನ್ನು ತನಿಖಾಧಿಕಾರಿ ಪಿ.ಕೆ ರಾಜು ನೇತೃತ್ವದಲ್ಲಿ ಬಂಧಿಸಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಆರೋಪಿಗಳು ಜಿಲ್ಲೆಯ ಮೂರ್ನಾಡು, ನಾಪೋಕ್ಲು, ಕಕ್ಕಬ್ಬೆ, ಪೊನ್ನಂಪೇಟೆ, ತಿತಿಮತಿ, ಗೋಣಿಕೊಪ್ಪ, ಮಡಿಕೇರಿ, ಕುಶಾಲನಗರ, ಸಿದ್ದಾಪುರ ವಿಭಾಗದ 22 ಅಂಗಡಿಗಳಿಗೆ ಕನ್ನ ಹಾಕಿ ಕಳ್ಳತನ ಮಾಡಿದ್ದ 1,12,900 ರೂ. ನಗದು, 17,300 ಬೆಲೆ ಬಾಳುವ ಸಿಗರೇಟ್‌ಗಳು, ಒಂದು ಬೈಕ್, ಒಂದು ಸ್ಟಾರ್ ಸಿಟಿ ಬೈಕ್, 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಆರೋಪಿಗಳಾದ ಸತೀಶ್ ಹಾಗೂ ಪ್ರಕಾಶ್ ಸಿದ್ದಪ್ಪ ತಳವಾರ್ ಈ ಹಿಂದೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12 ವಾಣಿಜ್ಯ ಮಳಿಗೆಗಳಲ್ಲಿನ ಕಳ್ಳತನ ಪ್ರಕರಣದ ಆರೋಪದಡಿ ಬಂಧಿತರಾಗಿ, 2016ರ ಅಕ್ಟೋಬರ್‌ನಲ್ಲಿ ಜಾಮೀನಿನ ಮೇಲೆ ಹೊರಬಂದು ಬೆಂಗಳೂರು ನಗರದ ಪೀಣ್ಯ ಬಳಿಯಲ್ಲಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಕೊಡಗಿನ ಚೇನಂಡ ಮುತ್ತಪ್ಪ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದರು ಎನ್ನಲಾಗಿದ್ದು, ಬಳಿಕ ಕೊಡಗು ಜಿಲ್ಲೆಗೆ ಆಗಮಿಸಿದ ಕಳ್ಳರ ಗುಂಪು ಹಲವು ಅಂಗಡಿ ಮಳಿಗೆಗಳಲ್ಲಿ ಕಳ್ಳತನ ನಡೆಸಿದ್ದರು. ಇವರನ್ನು ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಬಸ್ ತಂಗುದಾಣದ ಬಳಿ ಬಂಧಿಸಲಾಗಿದೆ.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ನಾಗಪ್ಪ, ವೃತ್ತ ನಿರೀಕ್ಷಕ ಪಿ.ಕೆ.ರಾಜು, ಗೋಣಿಕೊಪ್ಪ ಉಪ ನಿರೀಕ್ಷಕ ಹೆಚ್.ವೈ.ರಾಜು, ಪೊನ್ನಂಪೇಟೆ ಉಪ ನಿರೀಕ್ಷಕ ಜಯರಾಮ್, ಸಿಬ್ಬಂದಿಗಳಾದ ಹೆಚ್.ಕೆ. ಕೃಷ್ಣ, ಕೆ.ಕೆ.ಕುಶಾಲಪ್ಪ, ಮಹಮ್ಮದ್ ಅಲಿ, ಅಬ್ದುಲ್ ಮಜೀದ್, ನಾಣಯ್ಯ, ಕುಮಾರ್, ಮನು, ಸುಬ್ರಮಣಿ, ಮೋಹನ್, ಹರೀಶ್, ಸುಗಂಧ, ಬಿ.ಟಿ ಮಂಜುನಾಥ್, ಕೃಷ್ಣ ಮೂರ್ತಿ, ಶೋಭಾ ಹಾಗೂ ಚಾಲಕರಾದ ಕೃಷ್ಣಪ್ಪ, ಮಹೇಶ್, ರಾಜೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News