ಮಹಿಳೆಯ ಹತ್ಯೆ : ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಮಡಿಕೇರಿ ಮೇ 31 ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕುಶಾಲನಗರ ಸಮೀಪದ ಗೊಂದಿಬಸವನ ಹಳ್ಳಿ ನಿವಾಸಿ ಜಿ.ಟಿ.ಜಾನ್ಸನ್ ಅಲಿಯಾಸ್ ಜಾನಿ ಹಾಗೂ ಆತನ ಸಹೋದರ ಜಿ.ಟಿ. ಜಗ ಎಂಬವರೇ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
ಕುಶಾಲನಗರದ ಗುಮ್ಮನ ಕೊಲ್ಲಿ ನಿವಾಸಿ ರಾಜೀವ ಎಂಬವರ ವಿಚ್ಛೇದಿತ ಪತ್ನಿ ಕವಿತಾ 10 ವರ್ಷಗಳಿಂದ ಜಾನ್ಸನ್‌ನೊಂದಿಗೆ ವಾಸವಾಗಿದ್ದಳೆನ್ನಲಾಗಿದ್ದು, ಒಂದೂವರೆ ವರ್ಷಗಳಿಂದ ಜಾನ್ಸನ್ ಉಮಾ ಎಂಬಾಕೆಯೊಂದಿಗೆ ಸಹವಾಸ ಬೆಳೆಸಿದ ಹಿನ್ನೆಲೆಯಲ್ಲಿ ಕವಿತಾ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು. ಈ ಬಗ್ಗೆ ಕವಿತಾ ಹಾಗೂ ಜಾನ್ಸನ್ ನಡುವೆ ಆಗಾಗ ಕಲಹ ನಡೆಯುತ್ತಿತ್ತೆನ್ನಲಾಗಿದೆ. ಈ ಸಂಬಂಧ ಕವಿತಾ ಕುಶಾಲನಗರ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದರು.
ಉಮಾಳೊಂದಿಗೆ ಜಾನ್ಸನ್ ವಾಸವಾಗಿದ್ದುದನ್ನು ವಿರೋಧಿಸುತ್ತಿದ್ದ ಕವಿತಾ ಆತನ ಸಹೋದರ ಜಿ.ಟಿ. ಜಗ ಎಂಬಾತನೊಂದಿಗೂ ಜಗಳ ತೆಗೆಯುತ್ತಿದ್ದರೆನ್ನಲಾಗಿದೆ.
2016 ರ ಜ.19 ರ ರಾತ್ರಿ ಕವಿತಾ ತನ್ನ ವಾಸದ ಮನೆಯತ್ತ ತೆರಳುತ್ತಿದ್ದ ಸಂದರ್ಭ ಆಕೆಯೊಂದಿಗೆ ಜಗಳ ತೆಗೆದರೆಂದು ಹೇಳಲಾಗಿದೆ. ಈ ಸಂದರ್ಭ ಜಗ ತನ್ನ ಮನೆಯೊಳಗಿನಿಂದ ಕತ್ತಿ ತಂದಿದ್ದು, ಇದನ್ನು ಕಂಡು ಕವಿತಾ ತನ್ನ ಮನೆಯ ಕಡೆ ಓಡಲಾರಂಭಿಸಿದ್ದಾಳೆ. ಅರಣ್ಯ ಭಾಗದಲ್ಲಿ ಜಗ ಆಕೆಯನ್ನು ಕತ್ತಿಯಿಂದ ಕಡಿದಿದ್ದಲ್ಲದೆ, ಜಾನ್ಸನ್ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಎಂದು ದೂರು ದಾಖಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕುಶಾಲನಗರ ಪೊಲೀಸರು ಸಲ್ಲಿಸಿದ ದೋಷಾರೋಪಣಾ ಪಟ್ಟಿಯ ವಿಚಾರಣೆ ನಡೆಸಿದ ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪವನೇಶ್ ಅವರು, ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಾವತಿಯಾಗುವ ದಂಡದಲ್ಲಿ 25 ಸಾವಿರ ರೂ.ಗಳನ್ನು ಕವಿತಾಳ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಪಿರ್ಯಾದುದಾರ ರಾಜೀವ್ ಅವರಿಗೆ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ಅವರು ವಾದ ಮಂಡಿಸಿದರು.