ಪ್ಲಾಸ್ಟಿಕ್ ಸಕ್ಕರೆ ಪ್ರಕರಣ: ಪರಿಶೀಲಿಸಿದ ಸಚಿವರು
ಹಾಸನ, ಜೂ. 1: ನಗರದಲ್ಲಿ ಪ್ಲಾಸ್ಟಿಕ್ ಮಿಶ್ರಿತ ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹಳೆ ಬಸ್ ನಿಲ್ದಾಣದ ಎದುರು ಇರುವ ಅಂಗಡಿಯೊಂದಕ್ಕೆ ಅಧಿಕಾರಿ ಗಳೊಂದಿಗೆ ತೆರಳಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆಯಂತೆ ಪ್ಲಾಸ್ಟಿಕ್ ಹರಳು ತಯಾರಿಸಿ, ನಿಜವಾದ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಕಲಬೆರಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವ್ಯಕ್ತಿ ಓರ್ವ ವಿಡಿಯೋ ಕ್ಲಿಪ್‌ನ್ನು ಮಾಧ್ಯಮದವರಿಗೆ ನೀಡಿದ್ದಾರೆ. ಚಹಕ್ಕೆ ಹಾಕಿದಾಗ ಸಕ್ಕರೆ ಮಾತ್ರ ಕರಗಿ ಪ್ಲಾಸ್ಟಿಕ್ ತೇಲಾಡುತ್ತಿರುವುದು ಕಂಡು ಬಂದಿದೆ ಎಂದರು.
ಅಂಗಡಿಗಳಲ್ಲಿ ಇಂತಹ ಸಕ್ಕರೆ ಮಾರಾಟ ಕಂಡು ಬಂದರೆ ಸಕ್ಕರೆ ಸಪ್ಲೆ ಮಾಡಿದವರ ಬಗ್ಗೆ ದೂರು ನೀಡಬೇಕು. ಆಗೇ ಗ್ರಾಹಕರು ಕೂಡ ದೂರು ನೀಡಿದರೇ ಈ ಬಗ್ಗೆ ತನಿಖೆ ನಡೆಸಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಹೇಳಿದರು. ಇಂದು ನನಗೆ ಪ್ಲಾಸ್ಟಿಕ್ ಸಕ್ಕರೆ ಬಗ್ಗೆ ಕೇಳುತ್ತಿರುವುದು ಒಂದು ರೀತಿ ಶಾಕ್ ಸುದ್ದಿ ಆಯಿತು ಎಂದು ಹೇಳಿಕೊಂಡರು.
ಅಂಗಡಿಯಲ್ಲಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಎಲ್ಲಾವು ಸಕ್ಕರೆಯಂತೆ ಕಾಣಿಸಿಕೊಂಡಿದೆ. ಸಲ್ಪ ಸಕ್ಕರೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಕೃತ್ಯದ ಹಿಂದೆ ಯಾರೆಲ್ಲ ಶಾಮಿಲಾಗಿದ್ದಾರೆ ಎಂದು ತನಿಖೆ ನಡೆಸಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಇಂತಹ ಕೆಲಸ ಮಾಡುವವರು ಮನುಷ್ಯರಲ್ಲ ಎಂದು ಬೇಸರದಿಂದ ಹೇಳಿದರು. ಈಗಾಗಲೇ ತನಿಖೆ ನಡೆಸಲು ಆರೋಗ್ಯ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.