ಸಾಲಬಾಧೆ: ರೈತ ಆತ್ಮಹತ್ಯೆ
Update: 2017-06-01 18:46 IST
ಮಂಡ್ಯ, ಜೂ.1: ಸಾಲಬಾಧೆಯಿಂದ ನೊಂದ ಮದ್ದೂರು ತಾಲೂಕಿನ ದೊಡ್ಡಂಕನಹಳ್ಳಿ ಗ್ರಾಮದ ರೈತನೊಬ್ಬ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಬೋರಯ್ಯ (55) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಇವರು, ಎರಡು ಎಕರೆ ಜಮೀನು ಗೇಣಿ ಪಡೆದು ಕಬ್ಬು, ಹಿಪ್ಪುನೇರಳೆ ಬೇಸಾಯ ಮಾಡುತ್ತಿದ್ದರು.
ಆದರೆ, ಮಳೆಯಿಲ್ಲದೆ ಬೆಳೆಗಳು ನಾಶವಾಗಿದ್ದು ನಷ್ಟ ಅನುಭವಿಸಿದ್ದರು. ಕೃಷಿಗಾಗಿ ಕೊಪ್ಪ ಶಾಖೆ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.20 ಲಕ್ಷ ರೂ. ಹಸುವಿನ ಸಾಲ, ಶ್ರೀರಾಮ್ ಫೈನಾನ್ಸ್ ಕಂಪನಿಯಲ್ಲಿ 2.80 ಲಕ್ಷ ರೂ. ಹಾಗೂ ಲೇವಾದೇವಿದಾರರಿಂದ 2 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.
ಬೆಳೆ ನಷ್ಟದಿಂದ ಕಂಗಾಲಾಗಿದ್ದ ಬೋರಯ್ಯ, ಸಾಲ ತೀರಿಸುವುದು ಹೇಗೆಂದು ಚಿಂತಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಕೆಸ್ತೂರು ಪೊಲೀಸರಿಗೆ ದೂರು ನೀಡಿದ್ದಾರೆ. ಮೃತರಿಗೆ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ.