ಮುಂಡಳ್ಳಿ ಪಂ. ಪಿಡಿಒ ವರ್ತನೆ ವಿರುದ್ಧ ಸದಸ್ಯರ ಕಿಡಿ: ವರ್ಗಾವಣೆಗೆ ಒತ್ತಾಯ
ಭಟ್ಕಳ, ಜೂ.1: ತಾಲೂಕಿನ ಮುಂಡಳ್ಳಿ ಪಂ. ಅಭಿವೃದ್ಧಿ ಅಧಿಕಾರಿ ನಟರಾಜ್ ಸಾರ್ವಜನಿಕರ ಕೆಲಸಕ್ಕೆ ಅಸಡ್ಡೆ ತೋರಿಸುತ್ತಿದ್ದು, ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು ಎಂದು ಸದಸ್ಯರು ಪಕ್ಷ ಮರೆತು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಂ. ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ, ಪಿಡಿಒ ನಟರಾಜ್ ಕಳೆದ ಸಭೆಯ ಠರಾವಿಗೆ ಅಧ್ಯಕ್ಷರು ಹಾಗೂ ಸದಸ್ಯರ ಸಹಿ ಹಾಕಿಸಿಕೊಳ್ಳಲು ಮುಂದಾದರು. ಇದಕ್ಕೆ ಅಧ್ಯಕ್ಷೆ ನಾಗರತ್ನಾ ಮೊಗೇರ, ಉಪಾಧ್ಯಕ್ಷ ನಾಗಪ್ಪ ನಾಯ್ಕ ಹಾಗೂ ಸದಸ್ಯೆ ಶಿವಾನಿ ಶಾಂತಾರಾಮ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯ ಠರಾವುಗಳನ್ನು ಅಂದೇ ಬರೆದುಕೊಳ್ಳಬೇಕು ಎಂಬ ನಿಯಮವಿದ್ದರೂ ಒಂದು ತಿಂಗಳು ಕಳೆದ ಮೇಲೆ ಸಹಿ ಹಾಕಿಸಿಕೊಳ್ಳುವ ಉದ್ದೇಶವಾದರೂ ಏನು, ಇದಕ್ಕೆ ನಾವು ಒಪ್ಪುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಸದಸ್ಯೆ ಶಿವಾನಿ, ಶೌಚಾಲಯಗಳ ನಿರ್ಮಾಣಕ್ಕಾಗಿ ಸರಕಾರ ಬಹಳಷ್ಟು ಒತ್ತನ್ನು ನೀಡುತ್ತಿದೆ. ಆದರೆ ಶೌಚಾಲಯ ಕಟ್ಟಿಸಿಕೊಂಡವರಿಗೆ ಕಾಲಕ್ಕೆ ಸರಿಯಾಗಿ ಹಣವನ್ನು ಒದಗಿಸಲಾಗುತ್ತಿಲ್ಲ. ಎಲ್ಲರೂ ಒಂದೆಡೆ ಇದ್ದಾಗ ಬಿಲ್ ಪಾವತಿಗೆ ಒಪ್ಪಿಕೊಳ್ಳುವ ಪಿಡಿಒ, ನಂತರ ಸದಸ್ಯರು ತೆರಳಿದಾಗ ಫೋನ್ ಕರೆ ಮಾಡಿ ಸದಸ್ಯರ ನಡುವೆ ಒಡಕನ್ನುಂಟು ಮಾಡಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು.
ಬೀದಿ ದೀಪ ಸೌಕರ್ಯಕ್ಕಾಗಿ ಅಗತ್ಯ ಇರುವ ವಿದ್ಯುತ್ ಪರಿಕರಗಳು ಬೇಡಿಕೆಗನುಗುಣವಾಗಿ ಪಂಚಾಯತ್ ಕಚೇರಿಯನ್ನು ತಲುಪಿದ್ದರೂ ಪಿಡಿಒ ಸ್ವೀಕೃತಿಯ ಬಗ್ಗೆ ಸಹಿಯನ್ನು ಮಾಡದಿರುವ ಬಗ್ಗೆಯೂ ಸದಸ್ಯರು ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆಗಾಲ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಊಳು ತೆಗೆಯುವ ಕೆಲಸಕ್ಕೆ ಪಿಡಿಒ ಅನುಮತಿ ನೀಡುತ್ತಿಲ್ಲ. ಜನಪ್ರತಿನಿಧಿಗಳಾದ ನಾವು ಜನರಿಂದ ಆಕ್ರೋಶವನ್ನು ಎದುರಿಸಬೇಕಾಗಿದೆ ಎಂದು ಸದಸ್ಯ ಗೋವಿಂದ ಮೊಗೇರ ಅಧಿಕಾರಿಗಳ ಅಸಹಕಾರವನ್ನು ಬಿಚ್ಚಿಟ್ಟರು. ಇದಕ್ಕೆ ಬೆಂಬಲ ಸೂಚಿಸಿದ ಸದಸ್ಯ ಲಕ್ಷ್ಮಣ ಮೊಗೇರ, ಕುಡಿಯುವ ನೀರು ಒದಗಿಸುವ ಸಿಬ್ಬಂದಿಗೆ ಪಿಡಿಒ ಸಂಬಳಕ್ಕೆ ಸಹಿ ಮಾಡುತ್ತಿಲ್ಲ. ಇದು ಅತಿರೇಕದ ಪರಮಾವಧಿಯಾಗಿದೆ. ನೀವು ಹುದ್ದೆಗೆ ಯೋಗ್ಯರಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಸದಸ್ಯರ ಆರೋಪಗಳ ಸುರಿಮಳೆಯಿಂದ ವಿಚಲಿತರಾದಂತೆ ಕಂಡು ಬಂದ ಪಿಡಿಒ ನಟರಾಜ್, ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು, ಆಕ್ರೋಶಿತರಾಗಿ ಅಶ್ಲೀಲ ಪದ ಉಪಯೋಗಿಸಿದ್ದರೆನ್ನಲಾಗಿದ್ದು, ಮುಚ್ಚಿಕೊಂಡು ಕುಳಿತುಕೊಳ್ಳಿ’ ಎಂದು ತಾಕೀತು ಮಾಡಿದರು. ಅಧಿಕಾರಿಗಳು ಅಶ್ಲೀಲ ಪದ ಪ್ರಯೋಗಿಸುವುದನ್ನು ಸದಸ್ಯರೆಲ್ಲರೂ ಒಕ್ಕೊರಲಿನಿಂದ ಖಂಡಿಸಿದರು. ಓರ್ವ ಸರಕಾರಿ ಅಧಿಕಾರಿಯಾಗಿ ತುಂಬಿದ ಸಭೆಯಲ್ಲಿ ಜನಪ್ರತಿನಿಧಿಗಳನ್ನು ಈ ರೀತಿ ನಿಂದಿಸುವುದು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಇನ್ನಷ್ಟು ಉದ್ವೇಗಕ್ಕೆ ಒಳಗಾದ ಪಿಡಿಒ, ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸುತ್ತ ಸಭೆಯಿಂದ ಹೊರ ನಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ನಾಗರತ್ನಾ ಮೊಗೇರ, ಅಧಿಕಾರಿಗಳ ವರ್ತನೆಯನ್ನು ಸದಸ್ಯರೆಲ್ಲರೂ ಖಂಡಿಸುತ್ತೇವೆ. ಹಿರಿಯ ಅಧಿಕಾರಿಗಳು ಇವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಇನ್ನು 2-3 ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡದಿದ್ದರೆ ನಾವು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪಿಡಿಒ ನಟರಾಜ್ ವರ್ತನೆ ಅತಿರೇಕದ ಪರಮಾವಧಿಯಾಗಿದೆ. ಇವರಿಂದಾಗಿ ಯಾವುದೇ ಸಾರ್ವಜನಿಕ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದಾಗಿದೆ. ಇನ್ನು 2-3 ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡಲೇ ಬೇಕು. ಇಲ್ಲದೇ ಹೋದರೆ ಸದಸ್ಯರೆಲ್ಲರೂ ಧರಣಿ ಆರಂಭಿಸುತ್ತೇವೆ. ಊರಿನ ಹಿದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. - ನಾಗರತ್ನಾ ಮೊಗೇರ, ಅಧ್ಯಕ್ಷರು ಗ್ರಾಪಂ ಮುಂಡಳ್ಳಿ ಭಟ್ಕಳ