ಮೂವರು ಆರೋಪಿಗಳಿಗೆ ಶಿಕ್ಷೆ
ಚಿಕ್ಕಮಗಳೂರು, ಜೂ.1: ವರದಕ್ಷಿಣೆ ಲಾಲಸೆಗೆ ಮಹಿಳೆಯನ್ನು ಕೊಲೆಗೈಯಲು ಯತ್ನಿಸಿದ ಗುರು ಪ್ರಸಾದ್, ಕೆ.ಎಂ.ರಾಜಪ್ಪ, ಜಯಮ್ಮ ಎಂಬ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಆರೋಪಿ ಗುರುಪ್ರಸಾದ್ 3 ವರ್ಷದ ಹಿಂದೆ ಮಮತಾರೊಂದಿಗೆ ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ 2 ಲಕ್ಷ ರೂ.ನಗದು ಹಣ, ಬೈಕ್ ಹಾಗೂ 55 ಗ್ರಾಂ ಬಂಗಾರದ ಒಡವೆಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಆರೋಪಿ ಗುರು ಪ್ರಸಾದ್ ಹೆಂಡತಿಯನ್ನು 1 ವರ್ಷ ಚೆನ್ನಾಗಿ ನೋಡಿಕೊಂಡಿದ್ದು, ನಂತರ ‘ನೀನು ಚೆನ್ನಾಗಿಲ್ಲ, ನಿನಗೆ ಮಕ್ಕಳಾಗಿಲ್ಲ’ ಎಂಬ ಕಾರಣವೊಡ್ಡಿ ಮೂವರು ಆರೋಪಿತರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.
ತವರು ಮನೆಯಿಂದ ಹಣ ಮತ್ತು ಚಿನ್ನಾಭರಣ ಗಳನ್ನು ತರುವಂತೆ ಪೀಡಿಸುತ್ತಿದ್ದರು. ಇದೇ ವಿಚಾರದಲ್ಲಿ 2014ರ ನ.15ರಂದು ಮಧ್ಯಾಹ್ನ ಆರೋಪಿಗಳು ಸೇರಿ ತನ್ನನ್ನು ಗೋದಾಮಿಗೆ ಕರೆದೊಯ್ದು, ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿದ್ದಾಗಿ ಮಮತಾ ನೀಡಿದ ದೂರಿನನ್ವಯ ಅಜ್ಜಂಪುರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದರು. ಕಲಂ 498(ಎ), 307 ಸಹ ಕಲಂ 34 ಹಾಗೂ ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆಯ ಅಪರಾಧಕ್ಕೆ ಅನ್ವಯ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ಅವರು ಆರೋಪಿಗಳಾದ ಗುರುಪ್ರಸಾದ್, ಕೆ.ಎಂ.ರಾಜಪ್ಪ, ಜಯಮ್ಮ ಎಂಬವರಿಗೆ ಕಲಂ 324 ಮತ್ತು 498(ಎ), ಅಪರಾಧಕ್ಕೆ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 2,000 ದಂಡ, ಕಲಂ 3 ವರದಕ್ಷಿಣೆ ಅಪರಾಧಕ್ಕೆ ತಲಾ 5 ವರ್ಷ ಜೈಲು ಶಿಕ್ಷೆ ಹಾಗೂ ರೂ. 25,000 ದಂಡ, ಕಲಂ 4 ವರದಕ್ಷಿಣೆ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 2,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ.ಕೆ. ಕುಲಕರ್ಣಿ ಮೊಕದ್ದಮೆಯನ್ನು ನಡೆಸಿದರು.