'ಮರಳು ಗಣಿಗಾರಿಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ'
ಶಿವಮೊಗ್ಗ, ಜೂ. 1: ಮರಳು ಗಣಿಗಾರಿಕೆಯಿಂದ ಗ್ರಾಮದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ಕುರಿತು ಸ್ಥಳ ಪರಿಶೀಲನೆ ನಡೆಸಿ ಪರಿಸರಕ್ಕೆ ಹಾನಿಯಾಗದಂತೆ ಕಾನೂನಿನ ಅಡಿಯಲ್ಲಿ ಗಣಿಗಾರಿಕೆ ನಡೆಸಲು ನಿದರ್ಶನ ನೀಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮಸ್ಥರು ಗುರುವಾರ ನಗರದ ಡಿ.ಸಿ. ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಹೊಳಲೂರು ಹೋಬಳಿ, ಹಾಡೋನಹಳ್ಳಿ ಗ್ರಾಮದ ಹತ್ತಿರ ಮರಳು ಗಣಿಗಾರಿಕೆಗೆ ಭೂ ಮತ್ತು ವಿಜ್ಞಾನ ಇಲಾಖೆಯಿಂದ ಅನುಮತಿ ನೀಡಲಾಗಿದ್ದು, ಈ ರೀತಿ ಅನುಮತಿ ನೀಡಿದ ವ್ಯಕ್ತಿಗಳು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ರಾತ್ರಿ ಹೊತ್ತು ದೊಡ್ಡ ದೊಡ್ಡ ಹಿಟಾಚಿ ಯಂತ್ರ ಬಳಸಿ 40 ಅಡಿ ಆಳದ ವರೆಗೆ ಮರಳನ್ನು ತೆಗೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮರಳು ಸಾಗಾಣಿಕೆ ಮಾಡುವ ವಾಹನಗಳಿಗೆ 10 ಟನ್ ಕಾನೂನು ಮಿತಿ ಇದೆ. ಆದರೆ ಇವರು 15 ಟನ್ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ನಿಯಮ ಪಾಲನೆ ಮಾಡುತ್ತಿಲ್ಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಮರಳು ಲೋಡಿಂಗ್ ಪಾಯಿಂಟ್ ಸ್ಥಳದಲ್ಲಿ ಎಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿಲ್ಲ. ಈ ಲಾರಿಗಳು ಸರ್ಕಾರಿ ಶಾಲೆಯ ಮುಂದೆ ಅತೀ ವೇಗದಿಂದ ಓಡಾಡುವುದರಿಂದ ಮಕ್ಕಳಿಗೆ ಅಪಾಯ ಹೆಚ್ಚಾಗಿದೆ. ಗ್ರಾಮಸ್ಥರು ಜಾನುವಾರುಗಳಿಗೆ ನೀರು ಕುಡಿಸಲು, ಅಥವಾ ಬಟ್ಟೆ ಒಗೆಯಲು ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಕ್ಷಣವೇ ಜಿಲ್ಲಾಡಳಿತದ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಮರಳು ಸಾಗಾಣೆಯಲ್ಲಿ ಕಾನೂನು ಪರಿಪಾಲನೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಂದು ಕಚೇರಿ ಮುಂಭಾಗ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.